ಪಾಕಿಸ್ತಾನದಲ್ಲಿ ಈಗ ಕ್ರಿಕೆಟ್ ಅಂತ್ಯವಾಗಿದೆ: ಭಾರತ ವಿರುದ್ಧ ಸೋಲಿನ ನಂತರ ಮಾಜಿ ಕ್ರಿಕೆಟಿಗರ ವಾಗ್ದಾಳಿ
PC ; ICC
ಹೊಸದಿಲ್ಲಿ: ಸಾಂಪ್ರದಾಯಿಕ ಎದುರಾಳಿ ಭಾರತ ತಂಡ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಪಾಕಿಸ್ತಾನ ತಂಡ ಸತತ ಸೋಲಿನ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗರು ಹಾಗೂ ಕ್ರಿಕೆಟ್ ತಜ್ಞರು ತೀವ್ರವಾಗಿ ಟೀಕಿಸಿದ್ದಾರೆ.
ತಂಡದ ಪ್ರದರ್ಶನದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಅಹ್ಮದ್ ಶೆಹಝಾದ್, ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ.
‘‘ಒಂದು ಕಾಲದಲ್ಲಿ ರಾಷ್ಟ್ರದ ಹೆಮ್ಮೆಯಾಗಿದ್ದ ಕ್ರಿಕೆಟ್ ಈಗ ‘ಅಂತ್ಯವಾಗಿದೆ’. ಆಟಗಾರರ ಆಯ್ಕೆಯ ವೇಳೆ ಪಕ್ಷಪಾತದ ಧೋರಣೆ ತಳೆಯಲಾಗುತ್ತಿದೆ. ಪಾಕಿಸ್ತಾನದಲ್ಲಿಒಂದೇ ಒಂದು ಕ್ರೀಡೆ ಉಳಿದಿತ್ತು. ಅದು ಕ್ರಿಕೆಟ್. ಇಂದು ಅದು ಕೂಡ ನಾಶವಾಗಿದೆ’’ ಎಂದು ಅಹ್ಮದ್ ಶೆಹಝಾದ್ ಯೂಟ್ಯೂಬ್ ಚಾನೆಲ್ನೊಂದಿಗೆ ಮಾತನಾಡುತ್ತಾ ತಿಳಿಸಿದರು.
ರವಿವಾರ ದುಬೈನಲ್ಲಿ ವಿರಾಟ್ ಕೊಹ್ಲಿ ಅವರ ಆಕರ್ಷಕ ಶತಕದ ನೆರವಿನಿಂದ ಭಾರತ ತಂಡವು ಪಾಕಿಸ್ತಾನದ ವಿರುದ್ಧ 6 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿತ್ತು. ಈ ಸೋಲಿನ ನಂತರ ಪಾಕಿಸ್ತಾನ ತಂಡವು ತೀವ್ರ ಟೀಕೆಗೆ ಗುರಿಯಾಗಿದೆ.
ಮುಹಮ್ಮದ್ ರಿಝ್ವಾನ್ ಬಳಗವು ನ್ಯೂಝಿಲ್ಯಾಂಡ್ ವಿರುದ್ಧ್ದ ಕರಾಚಿಯಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಪಂದ್ಯದಲ್ಲಿ 321 ರನ್ ಚೇಸ್ ಮಾಡುವಲ್ಲಿ ವಿಫಲವಾಗಿ 60 ರನ್ ಅಂತರದಿಂದ ಸೋಲುಂಡಿತ್ತು.
ರಾಷ್ಟ್ರೀಯ ತಂಡಕ್ಕೆ ಆಟಗಾರರ ಆಯ್ಕೆಗೆ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್ಎಲ್)ಬದಲಿಗೆ ದೇಶೀಯ ಕ್ರಿಕೆಟ್ ಅನ್ನು ಮಾನದಂಡವನ್ನಾಗಿಸಬೇಕು ಎಂದು ಮಾಜಿ ಎಡಗೈ ವೇಗಿ ಮುಹಮ್ಮದ್ ಆಮಿರ್ ಆಗ್ರಹಿಸಿದರು.
‘‘ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಟಗಾರರ ಆಯ್ಕೆಗೆ ಪಿಎಸ್ಎಲ್ ಮಾನದಂಡವಾಗಬಾರದು ಎಂದು ಪಿಸಿಬಿಗೆ ನಾನು ವಿನಂತಿಸಿಕೊಳ್ಳುವೆ. ದೇಶೀಯ ಕ್ರಿಕೆಟ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದವರು ನಿಮ್ಮ ಆದ್ಯತೆಯಾಗಬೇಕೇ ಹೊರತು ಪಿಎಸ್ಎಲ್ ಅಲ್ಲ’’ ಎಂದು ಅಮಿರ್ ಹೇಳಿದ್ದಾರೆ.
‘‘ಹೀಗೆಯೇ ಆಗುತ್ತದೆ ಎಂದು ನನಗೆ ಗೊತ್ತಿತ್ತು. ನೀವು 1980-90ರ ಮನಸ್ಥಿತಿಯಲ್ಲಿ ಕ್ರಿಕೆಟ್ ಆಡಿದರೆ 2025ರಲ್ಲಿ ನೀವು ಖಂಡಿತವಾಗಿಯೂ ಪಂದ್ಯವನ್ನು ಸೋಲುತ್ತೀರಿ. ನನ್ನ ಪ್ರಕಾರ 2017ರ ನಂತರ ಎಲ್ಲ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನದ ಪ್ರದರ್ಶನ ನೀರಸವಾಗಿತ್ತು. ನಮ್ಮ ತಯಾರಿಗೆ ಬಗ್ಗೆ ಯಾವಾಗಲೂ ಮಾತನಾಡುತ್ತಿರುತ್ತೇವೆ. ನಮ್ಮ ತವರಿನಲ್ಲಿ ಯಾವ ರೀತಿಯ ತಂಡವನ್ನು ಆಡಿಸಬೇಕೆಂದು ನಮಗೆ ಗೊತ್ತಿಲ್ಲ. ಬಲಿಷ್ಠ ತಂಡಗಳ ಎದುರು ನಾವು ಆಕ್ರಮಣಕಾರಿ ಮನೋಭಾವದೊಂದಿಗೆ ಆಡಬೇಕು’’ ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹೇಳಿದ್ದಾರೆ.
ಭಾರತ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಸತತ ಪಂದ್ಯಗಳಲ್ಲಿ ಸೋತಿರುವ ಪಾಕಿಸ್ತಾನ ತಂಡದ ಚಾಂಪಿಯನ್ಸ್ ಟ್ರೋಫಿಯ ಸೆಮಿ ಫೈನಲ್ ಆಸೆ ಬಹುತೇಕ ಕಮರಿಹೋಗಿದೆ.
ಬಾಂಗ್ಲಾದೇಶ ಹಾಗೂ ನ್ಯೂಝಿಲ್ಯಾಂಡ್ ನಡುವಿನ ಪಂದ್ಯದತ್ತ ಪಾಕಿಸ್ತಾನ ಗಮನ ಹರಿಸಿದೆ. ಒಂದು ವೇಳೆ ಈ ಪಂದ್ಯದಲ್ಲಿ ಬಾಂಗ್ಲಾದೇಶ ಜಯ ಸಾಧಿಸಿದರೆ ‘ಎ’ ಗುಂಪಿನಲ್ಲಿ ಪಾಕಿಸ್ತಾನ ತಂಡ ಇನ್ನೂ ಕೆಲವು ದಿನಗಳ ಕಾಲ ಸ್ಪರ್ಧೆಯಲ್ಲಿ ಉಳಿದುಕೊಳ್ಳಬಹುದು. ಒಂದೊಮ್ಮೆ ನ್ಯೂಝಿಲ್ಯಾಂಡ್ ಜಯ ಸಾಧಿಸಿದರೆ ಸೆಮಿ ಫೈನಲ್ನಲ್ಲಿ ಭಾರತ ತಂಡವನ್ನು ಸೇರಿಕೊಳ್ಳಲಿದೆ.
ಪಾಕಿಸ್ತಾನ ತಂಡವು ಇದೀಗ ದುಬೈನಿಂದ ಸ್ವದೇಶಕ್ಕೆ ವಾಪಸಾಗಿ ಗುರುವಾರ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ತನ್ನ ನಿರ್ಣಾಯಕ ಪಂದ್ಯಕ್ಕೆ ತಯಾರಿ ನಡೆಸಲಿದೆ. ಮತ್ತೊಂದೆಡೆ, ಭಾರತ ತಂಡವು ರವಿವಾರ (ಮಾ.2) ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ.