×
Ad

ಪಾಕ್ ಶೆಲ್ ದಾಳಿ: ಐಎಎಫ್ ಸರ್ಜೆಂಟ್ ಮತ್ತು ಬಿಎಸ್ಎಫ್ ಎಸ್ಐ ಹುತಾತ್ಮ

Update: 2025-05-11 08:56 IST

BSF SI Mohammed Imtiaz (L) & Sergeant Surendra Kumar Moga

ಜಮ್ಮು: ಕದನ ವಿರಾಮವನ್ನು ಉಲ್ಲಂಘಿಸಿ ಪಾಕಿಸ್ತಾನ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ ಕಳೆದ 24 ಗಂಟೆಗಳಲ್ಲಿ ಭಾರತೀಯ ವಾಯುಪಡೆಯ ಸರ್ಜೆಂಟ್ ಮತ್ತು ಬಿಎಸ್ಎಫ್ ಎಸ್ಐ ಹುತಾತ್ಮರಾಗಿದ್ದಾರೆ. ಜಮ್ಮು ಪ್ರದೇಶದಲ್ಲಿ ಪಾಕ್ ಸೇನೆ ನಡೆಸುತ್ತಿರುವ ಶೆಲ್ ದಾಳಿಯಲ್ಲಿ ಇತರ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಹಿಮಾಚಲ ಪ್ರದೇಶ ಮೂಲದ ಜೆಸಿಓ ಸುಬೇದಾರ್ ಮೇಜರ್ ಪವನ್ ಕುಮಾರ್ ಶನಿವಾರ ಮುಂಜಾನೆ ಪೂಂಚ್ ಪ್ರದೇಶದ ಕೃಷ್ಣ ಘಾಟಿ ಸೆಕ್ಟರ್ನಲ್ಲಿ ಶೆಲ್ ಸಿಡಿದು ಮೃತಪಟ್ಟಿದ್ದಾರೆ. ಅಂತೆಯೇ ಜಮ್ಮು & ಕಾಶ್ಮೀರ ಲೈಟ್ ಇನ್ಫ್ಯಾಂಟ್ರಿಯ ರೈಫಲ್ಮನ್ ಸುನೀಲ್ ಕುಮಾರ್ (25) ಅವರು ಆರ್.ಎಸ್.ಪುರ ಪ್ರದೇಶದಲ್ಲಿ ನಡೆದ ಗುಂಡಿನದಾಳಿ ಮತ್ತು ಶೆಲ್ಲಿಂಗ್ನಲ್ಲಿ ತೀವ್ರವಾಗಿ ಗಾಯಗೊಂಡು ಅಸು ನೀಗಿದ್ದಾರೆ. ಐಎಎಫ್ 36ನೇ ವಿಂಗ್ ಗೆ ಸೇರಿದ 36 ವರ್ಷದ ವೈದ್ಯಕೀಯ ಸಹಾಯಕ ಸರ್ಜೆಂಟ್ ಸುರೇಂದ್ರ ಕುಮಾರ್ ಮೋಗಾ ಉಧಾಂಪುರದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಮೂಲತಃ ಬೆಂಗಳೂರಿನಲ್ಲಿ ನಿಯೋಜಿಸಲ್ಪಟ್ಟಿದ್ದ ಇವರು, ನಾಲ್ಕು ದಿನಗಳ ಹಿಂದೆ ಉದ್ವಿಗ್ನತೆ ಹಿನ್ನೆಲೆಯಲ್ಲಿ ಉಧಾಂಪುರಕ್ಕೆ ನಿಯೋಜಿತರಾಗಿದ್ದರು.

ರಾಜಸ್ಥಾನದ ಮೆಹರ್ದಾಸಿಯಲ್ಲಿರುವ ಮೋಗಾ ಕುಟುಂಬಕ್ಕೆ ಈ ಮಾಹಿತಿಯನ್ನು ರವಾನಿಸಲಾಗಿದೆ. ಅವರಿಗೆ 65 ವರ್ಷದ ತಾಯಿ ನಾನು ದೇವಿ, ಪತ್ನಿ ಸೀಮಾ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅವರ ಗೌರವಾರ್ಥ ಇಡೀ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ.

ಆರ್ಎಸ್ ಪುರ ಪ್ರದೇಶದಲ್ಲಿ ನಡೆದ ತೀವ್ರ ದಾಳಿಯಲ್ಲಿ ಬಿಎಸ್ಎಫ್ ಘಟಕದ ಸಬ್ ಇನ್ಸ್ಪೆಕ್ಟರ್ ಮೊಹ್ಮದ್ ಇಮ್ತಿಯಾಜ್ ಹುತಾತ್ಮರಾಗಿದ್ದರೆ, ಇತರ ಏಳು ಮಂದಿ ಗಾಯಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News