ಒಡಿಶಾ: ರೇಬೀಸ್ ಸೋಂಕಿತ ನಾಯಿ ಕಡಿದು ಓರ್ವ ಪ್ಯಾರಾ ಅಥ್ಲೀಟ್ ಸೇರಿದಂತೆ ಇಬ್ಬರು ಮೃತ್ಯು
ಜೋಗೇಂದ್ರ ಛಾತ್ರಿಯಾ (Photo credit: NDTV)
ಭುವನೇಶ್ವರ: ರೇಬೀಸ್ ಸೋಂಕಿತ ನಾಯಿ ಕಡಿತದಿಂದ ಓರ್ವ ರಾಷ್ಟ್ರೀಯ ಮಟ್ಟದ ಪ್ಯಾರಾ ಅಥ್ಲೀಟ್ ಮೃತಪಟ್ಟಿರುವ ಘಟನೆ ಒಡಿಶಾದ ಬೊಲಾಂಗೀರ್‌ನಲ್ಲಿ ನಡೆದಿದೆ.
ಜುಲೈ 23ರಂದು 33 ವರ್ಷದ ಪ್ಯಾರಾ ಅಥ್ಲೀಟ್ ಜೋಗೇಂದ್ರ ಛಾತ್ರಿಯಾ ಸೇರಿದಂತೆ ಒಟ್ಟು ಆರು ಮಂದಿಗೆ ನಾಯಿ ಕಚ್ಚಿದೆ. ಅಲ್ಲದೇ ಶಾಲೆಗೆ ತೆರಳುತ್ತಿದ್ದ ಕೆಲವು ವಿದ್ಯಾರ್ಥಿಗಳಿಗೆ ನಾಯಿಯೊಂದು ಕಚ್ಚಿತ್ತು. ನಂತರ, ಅವರನ್ನೆಲ್ಲ ಬೊಲಾಂಗೀರ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಅವರನ್ನು ಬುರ್ಲಾ ಆಸ್ಪತ್ರೆಗೆ ಶಿಫಾರಸು ಮಾಡಲಾಗಿತ್ತು.
ಈ ಪೈಕಿ ನಾಲ್ಕು ಮಂದಿ ಚೇತರಿಸಿಕೊಂಡರೆ, ಚಿಕಿತ್ಸೆ ಪಡೆಯುತ್ತಿದ್ದ ಹೃಷಿಕೇಶ್ ರಾಣಾ (48) ಹಾಗೂ ಜೋಗೇಂದ್ರ ಛಾತ್ರಿಯಾ ಶನಿವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಳೆದ ತಿಂಗಳು ಕೇಂದ್ರ ಸರಕಾರ ಹಂಚಿಕೊಂಡಿದ್ದ ಮಾಹಿತಿಯ ಪ್ರಕಾರ, 2024ರಲ್ಲಿ 37 ಲಕ್ಷ ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 54 ಮಂದಿ ಶಂಕಿತ ರೇಬೀಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು.