ಸಾವಿನ ದವಡೆಯಿಂದ ಪಾರಾಗಿ ಖೇಲೋ ಇಂಡಿಯಾದಲ್ಲಿ ಚಿನ್ನ ಗೆದ್ದ ಪ್ಯಾರಾ ಅಥ್ಲೀಟ್!
Photo: twitter
ಹೊಸದಿಲ್ಲಿ: ಸಾನಿನ ದವಡೆ ತಲುಪಿದ್ದ ಯುವಕನೊಬ್ಬನ ಈ ಅಮೋಘ ಸಾಧನೆ ಎಂತಹವರಿಗೂ ಮಾದರಿಯಾಗುವಂತಹದ್ದು.
2009ರಲ್ಲಿ ಗಧಾಧರ ಸಾಹು ಎಂಬ ಯುವಕ ಒಡಿಶಾದಿಂದ ಗುಜರಾತ್ನ ಸೂರತ್ಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ರೈಲು ಇಳಿಯುವ ವೇಳೆ ತೀವ್ರ ಅಪಘಾತಕ್ಕೆ ಈಡಾಗಿ, ಸಾವಿನ ಅಂಚು ತಲುಪಿದ್ದರು. ಶವಾಗಾರಕ್ಕೆ ಕೊಂಡೊಯ್ದ ಸಂದರ್ಭದಲ್ಲಿ ವೈದ್ಯಕೀಯ ತಂಡ ನಾಡಿ ಮಿಡಿತ ನೋಡಿ, ಈತ ಜೀವಂತ ಇರುವುದನ್ನು ಪತ್ತೆ ಮಾಡಿತ್ತು. ತೀವ್ರ ಗಾಯದ ಕಾರಣದಿಂದ ಕಾಲು ಕತ್ತರಿಸಬೇಕಾಯಿತು.
ಇದೀಗ 29 ವರ್ಷದ ಸಾಹು, ಈ ಎಲ್ಲ ಪ್ರತಿಕೂಲಗಳನ್ನು ದಾಟಿ ಖೇಲೊ ಇಂಡಿಯಾ ಪ್ಯಾರಾ ಗೇಮ್ಸ್ನ ಪವರ್ಲಿಫ್ಟಿಂಗ್ ನಲ್ಲಿ ಒಡಿಶಾ ತಂಡಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. 59 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಸಾಹು, ಗಣನೀಯ ಪ್ರದರ್ಶನ ನೀಡಿ, 140 ಕೆಜಿ ಭಾರ ಎತ್ತುವ ಮೂಲಕ ಈ ಅಮೋಘ ಸಾಧನೆ ಮಾಡಿದ್ದಾರೆ.
ಜೀವನದ ಸಾಂಪ್ರದಾಯಿಕ ಹಾದಿಗಳು ಮುಚ್ಚಿದಾಗ, ಒಡಿಶಾದ ಗಂಜಮ್ ಗಡಿಯಲ್ಲಿರುವ ನರೇಂದ್ರಪುರ ಪಟ್ಟಣದಲ್ಲಿದ್ದ ಸಹೋದರನ ಫಾಸ್ಟ್ ಫುಡ್ ಕಿಯೋಸ್ಕ್ ನಲ್ಲಿ ಸಹಾಯಕ್ಕೆ ನಿಂತರು. ಬಾಡಿ ಬಿಲ್ಡಿಂಗ್ ಅನ್ನು ಹವ್ಯಾಸವಾಗಿ ರೂಢಿಸಿಕೊಂಡ ಸಾಹು ಇದರಲ್ಲಿ ಗಣನೀಯ ಸಾಧನೆ ಮಾಡಿದರು.
2016ರಲ್ಲಿ ಸಾಹು ಮಿಸ್ಟರ್ ಒಡಿಶಾ ಜ್ಯೂನಿಯರ್ ಬಾಡಿಬಿಲ್ಡಿಂಗ್ ಸ್ಪರ್ಧೆಯ ವ್ಹೀಲ್ ಚೇರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಇದೀಗ ಆರ್ಥಿಕ ಇತಿಮಿತಿಯ ಹಿನ್ನೆಲೆಯಲ್ಲಿ ಅಗತ್ಯ ಪೂರಕ ಆಹಾರ ಮತ್ತು ಪೌಷ್ಟಿಕ ಆಹಾರವನ್ನು ಪಡೆಯಲು ಸಾಧ್ಯವಾಗದೇ ಪ್ಯಾರಾ ಪವರ್ ಲಿಫ್ಟಿಂಗ್ ಗೆ ತಮ್ಮ ವೃತ್ತಿಯನ್ನು ಬದಲಿಸಿಕೊಂಡರು.
ಪತ್ರಿಕೆಗಳಲ್ಲಿ ಪ್ಯಾರಾ ಅಥ್ಲೀಟ್ ಗಳ ಯಶೋಗಾಥೆಯನ್ನು ಓದಿದ ಬಳಿಕ ಸಾಹು, ಇದರಿಂದ ಸ್ಫೂರ್ತಿ ಪಡೆದರು. ಬಾಡಿಬಿಲ್ಡಿಂಗ್ ಹಿನ್ನೆಲೆಯನ್ನು ಹೊಂದಿದ್ದ ಸಾಹು, ಸರಾಗವಾಗಿ ಪ್ಯಾರಾ ಪವರ್ ಲಿಫ್ಟಿಂಗ್ ಅಳವಡಿಸಿಕೊಂಡು ತಮ್ಮ ಗುರಿಯತ್ತ ಕೇಂದ್ರೀಕರಿಸಿದರು. ಪರಿಶ್ರಮದ ಫಲವಾಗಿ ಖೇಲೊ ಇಂಡಿಯಾದ ಪ್ಯಾರಾಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದರು.