×
Ad

ಪರಾಗ್ ಶಾ ಭಾರತದ ಶ್ರೀಮಂತ ಶಾಸಕ; ಕಡುಬಡವ ಶಾಸಕನ ಸಂಪತ್ತು ಎಷ್ಟು ಗೊತ್ತೇ?

Update: 2025-03-18 08:30 IST

PC: x.com/ParagShahBJP

ಮುಂಬೈ: ಒಟ್ಟು 3400 ಕೋಟಿ ರೂಪಾಯಿ ಘೋಷಿತ ಆಸ್ತಿ ಹೊಂದಿರುವ ಮಹಾರಾಷ್ಟ್ರದ ಘಟ್ಕೋಪರ್ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಬಿಜೆಪಿಯ ಪರಾಗ್ ಶಾ ದೇಶದ ಅತ್ಯಂತ ಶ್ರೀಮಂತ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋಮವಾರ ಬಿಡುಗಡೆಯಾದ ಹೊಸ ಎಡಿಆರ್ ವರದಿಯಲ್ಲಿ ಈ ಉಲ್ಲೇಖ ಇದೆ.

ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ 1413 ಕೋಟಿ ರೂಪಾಯಿ ಮೌಲ್ಯದ ಘೋಷಿತ ಆಸ್ತಿಯೊಂದಿಗೆ ದೇಶದ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಸೋಸಿಯಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ (ಎನ್ಇಡಬ್ಲ್ಯೂ) ದೇಶದ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕರು ಕಳೆದ ವಿಧಾನಸಭಾ ಚುನಾವಣೆಗಳಲ್ಲಿ ಸ್ಪಧಿಸುವ ಮುನ್ನ ಸಲ್ಲಿಸಿರುವ ಸ್ವಯಂ ಪ್ರಮಾಣಿತ ಅಫಿಡವಿಟ್ ಗಳನ್ನು ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಿವೆ. ದೇಶದ 28 ರಾಜ್ಯ ವಿಧಾನಸಭೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 4123 ಶಾಸಕರ ಪೈಕಿ 4092 ಮಂದಿ ಶಾಸಕರ ಅಫಿಡವಿಟ್ ಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. 24 ಶಾಸಕರ ಅಫಿಡವಿಟ್ ಗಳು ಸರಿಯಾಗಿ ಸ್ಕ್ಯಾನ್ ಆಗದ ಕಾರಣ ಅವುಗಳನ್ನು ಓದುವಂತಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಆಂಧ್ರಪ್ರದೇಶ ಸಿಎಂ ಎನ್.ಚಂದ್ರಬಾಬು ನಾಯ್ಡು (931 ಕೋಟಿ), ಮಾಜಿ ಸಿಎಂ ಜಗನ್ಮೋಹನ್ ರೆಡ್ಡಿ (757 ಕೋಟಿ) ಅಗ್ರ 10 ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪಶ್ಚಿಮ ಬಂಗಾಳದ ಇಂಡೂಸ್ ಬಿಜೆಪಿ ಶಾಸಕ ನಿರ್ಮಲ್ ಕುಮಾರ್ ಧಾರಾ ಕೇವಲ 1700 ರೂಪಾಯಿ ಮೌಲ್ಯದ ಆಸ್ತಿ ಘೋಷಿಸಿದ್ದು, ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ.

4092 ಶಾಸಕರ ಪೈಕಿ 119 ಮಂದಿ ಶತಕೋಟ್ಯಧಿಪತಿಗಳು. ನಾಲ್ವರು ಶಾಸಕರು 1000 ಕೋಟಿಗಿಂತ ಹೆಚ್ಚಿನ ಸಂಪತ್ತು ಹೊಂದಿದ್ದು, ಎಂಟು ಮಂದಿ 500 ರಿಂದ 1000 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ರಾಜ್ಯದ ಎಲ್ಲ ಶಾಸಕರ ಆಸ್ತಿ ಮೌಲ್ಯವನ್ನು ಒಟ್ಟುಗೂಡಿಸಿದರೆ ಗರಿಷ್ಠ ಆಸ್ತಿ ಹೊಂದಿರುವವರು ಕರ್ನಾಟಕದ ಶಾಸಕರು. 223 ಶಾಸಕರ ಒಟ್ಟು ಆಸ್ತಿ ಮೌಲ್ಯ 13179 ಕೋಟಿ ರೂಪಾಯಿ. ಉಳಿದಂತೆ ಮಹಾರಾಷ್ಟ್ರ (12,424 ಕೋಟಿ) ಮತ್ತು ಆಂಧ್ರಪ್ರದೇಶ (11323 ಕೋಟಿ) ನಂತರದ ಸ್ಥಾನಗಳಲ್ಲಿವೆ. ಆದರೆ ಆಂಧ್ರಪ್ರದೇಶ ಶಾಸಕರ ಸರಾಸರಿ ಆಸ್ತಿ ಮೌಲ್ಯ ದೇಶದಲ್ಲೇ ಅತ್ಯಧಿಕ. 174 ಶಾಸಕರಿರುವ ಈ ರಾಜ್ಯದ ಶಾಸಕರ ಸರಾಸರಿ ಆಸ್ತಿ ಮೌಲ್ಯ 65.07 ಕೋಟಿ. 63.58 ಕೋಟಿ ಸರಾಸರಿ ಆಸ್ತಿ ಮೌಲ್ಯ ಹೊಂದಿರುವ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದರೆ, 286 ಶಾಸಕರನ್ನು ಹೊಂದಿರುವ ಮಹಾರಾಷ್ಟ್ರದ ಶಾಸಕರ ಸರಾಸರಿ ಆಸ್ತಿ ಮೌಲ್ಯ 43.44 ಕೋಟಿ ರೂಪಾಯಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News