ಸಂಸತ್ತಿನ ಉಭಯ ಸದನಗಳ ಕಲಾಪ 1 ದಿನ ಮುಂದೂಡಿಕೆ
PC : PTI
ಹೊಸದಿಲ್ಲಿ, ಆ. 5: ಸಂಸತ್ತಿನ ಎರಡೂ ಸದನಗಳಾದ ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪವನ್ನು ಸೋಮವಾರ ಒಂದು ದಿನ ಮುಂದೂಡಲಾಯಿತು.
ಹಾಲಿ ಸಂಸದ ಹಾಗೂ ಜೆಎಂಎಂ ವರಿಷ್ಠ ಶಿಬು ಸೊರೇನ್ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸಭೆಯನ್ನು ಒಂದು ದಿನ ಮುಂದೂಡಲಾಯಿತು. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷದಿಂದ ನಿರಂತರ ಪ್ರತಿಭಟನೆ ನಡೆಯುತ್ತಿರುವ ನಡುವೆ ಲೋಕಸಭೆಯನ್ನು ಒಂದು ದಿನಕ್ಕೆ ಮುಂದೂಡಲಾಯಿತು.
ಐದು ಬಾರಿ ಲೋಕಸಭೆಯ ಸಂಸದರಾಗಿದ್ದ ಹಾಗೂ ಮೂರು ಬಾರಿ ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿದ್ದ ಶಿಬು ಸೊರೇನ್ (81) ಸೋಮವಾರ ನಿಧನರಾದರು. ಅವರು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಕಲ್ಲಿದ್ದಲು ಸಚಿವರಾಗಿದ್ದರು. ಅಲ್ಲದೆ, ಅವರು 2020 ಜೂನ್ ನಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ಉಪಾಧ್ಯಕ್ಷ ಹರಿವಂಶ್ ಅವರು ಶ್ರದ್ದಾಂಜಲಿ ಪ್ರಸ್ತಾವನೆಯನ್ನು ಓದಿದರು. ಸದಸ್ಯರು ಮೌನವಾಗಿ ಎದ್ದು ನಿಂತ ಗೌರವ ಸಲ್ಲಿಸಿದರು. ಅನಂತರ ಸದನವನ್ನು ಮುಂದೂಡಲಾಯಿತು. ಯಾವುದೇ ಕಲಾಪ ನಡೆಯಲಿಲ್ಲ.
ಈ ನಡುವೆ, ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತ ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಸದನ ಮತ್ತೆ ಅಪರಾಹ್ನ 2 ಗಂಟೆಗೆ ಸೇರಿದಾಗ ಕಾಂಗ್ರೆಸ್ ಸಂಸದರು ಸೇರಿದಂತೆ ಪ್ರತಿಪಕ್ಷದ ಸಂಸದರು ಪ್ರತಿಭಟನಾ ಫಲಕಗಳೊಂದಿಗೆ ಎದ್ದು ನಿಂತರು ಹಾಗೂ ಘೋಷಣೆಗಳನ್ನು ಕೂಗಿದರು.
ಕಲಾಪದ ಅಧ್ಯಕ್ಷತೆ ವಹಿಸಿದ್ದ ಜಗದಾಂಬಿಕಾ ಪಾಲ್, ಪುನರಾವರ್ತಿತ ಅಡ್ಡಿಯಿಂದಾಗಿ ಜುಲೈ 21ರಂದು ಮುಂಗಾರು ಅಧಿವೇಶನ ಆರಂಭವಾದ ಬಳಿಕ ಒಂದೇ ಒಂದು ಮಸೂದೆಯನ್ನು ಅಂಗೀಕರಿಸಿಲ್ಲ ಎಂದು ಪ್ರತಿಪಕ್ಷದ ಸಂಸದರಿಗೆ ನೆನಪಿಸಿದರು. ಗದ್ದಲದ ಕಾರಣಕ್ಕೆ ಅವರು ಸದನವನ್ನು ಆಗಸ್ಟ್ 5 ಪೂರ್ವಾಹ್ನ 11 ಗಂಟೆಗೆ ಮುಂದೂಡಿದರು.
ಇದಕ್ಕೂ ಮುನ್ನ ಸ್ಪೀಕರ್ ಓಂ ಬಿರ್ಲಾ ಅವರು ಸದನವನ್ನು ಸುಗಮವಾಗಿ ನಡೆಸಲು ಪ್ರತಿ ದಿನ ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು. ಆದರೆ, ಪ್ರತಿಭಟನಾ ನಿರತ ಸಂಸದರು ಸದನದ ಕಲಾಪಕ್ಕೆ ವ್ಯವಸ್ಥಿತವಾಗಿ ಅಡ್ಡಿ ಪಡಿಸುತ್ತಿದ್ದಾರೆ ಎಂದು ತಿಳಿಸಿದರು.