'ರಾಷ್ಟ್ರದ ಶತ್ರು' ಹೇಳಿಕೆ : ಅರ್ನಬ್ ಗೋಸ್ವಾಮಿ ವಿರುದ್ಧ ದಿಲ್ಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ ಕಾಂಗ್ರೆಸ್ ನಾಯಕ ಪವನ್ ಖೇರಾ
ಪವನ್ ಖೇರಾ / ಅರ್ನಬ್ ಗೋಸ್ವಾಮಿ (Photo credit: PTI,thenewsminute.com)
ಹೊಸದಿಲ್ಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ʼರಾಷ್ಟ್ರದ ಶತ್ರುʼ ಜೊತೆಗಿತ್ತು ಎಂದು ನೇರ ಪ್ರಸಾರದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕ ಪವನ್ ಖೇರಾ ದಿಲ್ಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ನ್ಯಾಯಮೂರ್ತಿ ಪುರುಷೀಂದ್ರ ಕುಮಾರ್ ಕೌರವ್ ಮಂಗಳವಾರ ಈ ಕುರಿತು ಸಂಕ್ಷಿಪ್ತವಾಗಿ ವಾದವನ್ನು ಆಲಿಸಿದರು.
ಭಾರತ ಪಾಕಿಸ್ತಾನದ ವಿರುದ್ಧ ಹೋರಾಡುತ್ತಿರುವಾಗ ರಿಪಬ್ಲಿಕ್ ಟಿವಿಯ ನೇರ ಪ್ರಸಾರದಲ್ಲಿ ಅರ್ನಬ್ ಗೋಸ್ವಾಮಿ ಮಾನನಷ್ಟಕರ ಹೇಳಿಕೆ ನೀಡಿದ್ದಾರೆ ಪವನ್ ಖೇರಾ ಆರೋಪಿಸಿದ್ದಾರೆ.
ʼಈಗ ಪಕ್ಷವು ರಾಷ್ಟ್ರದ ಶತ್ರುವಿನ ಜೊತೆಗಿದೆ, ನೀವು ಕಾಂಗ್ರೆಸ್ ಮತದಾರರಾಗಿದ್ದರೆ, ನೀವು ಕೂಡ ರಾಷ್ಟ್ರದ ಶತ್ರುವೇʼ ಎಂದು ಅರ್ನಬ್ ಗೋಸ್ವಾಮಿ ನೇರ ಪ್ರಸಾರದಲ್ಲಿ ಹೇಳಿದ್ದರು ಎಂದು ಪವನ್ ಖೇರಾ ಆರೋಪಿಸಿದ್ದಾರೆ.