ಮಕ್ಕಳೊಂದಿಗೆ ವಾಹನ ಚಾಲನೆ ಮಾಡುವ ವೇಳೆ ಸಂಚಾರ ನಿಯಮ ಉಲ್ಲಂಘನೆಗೆ ದಂಡ ದುಪ್ಪಟ್ಟು!
ಹೊಸದಿಲ್ಲಿ: ಸುರಕ್ಷತೆ ಮತ್ತು ಹೊಣೆಗಾರಿಕೆಯನ್ನು ಖಾತರಿಪಡಿಸುವ ಉದ್ದೇಶದಿಂದ ಪುಟ್ಟ ಮಕ್ಕಳನ್ನು ವಾಹನದಲ್ಲಿ ಕರೆದೊಯ್ಯುವ ವೇಳೆ ಸಂಚಾರ ನಿಮಯವನ್ನು ಉಲ್ಲಂಘಿಸುವವರಿಗೆ ವಿಧಿಸುವ ದಂಡವನ್ನು ದುಪ್ಪಟ್ಟುಗೊಳಿಸುವ ಬಗ್ಗೆ ಸಾರಿಗೆ ಸಚಿವಾಲಯ ಚಿಂತನೆ ನಡೆಸಿದೆ. ಇದರ ಜತೆಗೆ ಎಲ್ಲ ಚಾಲಕರಿಗೆ ಸಂಚಾರ ನಿಯಮಗಳ ಅನುಸರಣೆ ಅಥವಾ ಉಲ್ಲಂಘನೆಯ ಆಧಾರದಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಅಂಕ ಪದ್ಧತಿ ಆರಂಭಿಸಲು ಕೂಡಾ ಉದ್ದೇಶಿಸಲಾಗಿದೆ.
ಈ ಸಂಬಂಧ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲು ಉದ್ದೇಶಿಸಿದ್ದು, ಪ್ರಸ್ತಾವಿತ ತಿದ್ದುಪಡಿಗಳನ್ನು ಅಭಿಪ್ರಾಯ ಸಂಗ್ರಹಕ್ಕಾಗಿ ಇತರ ಸಚಿವಾಲಯಗಳಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ. ಪುಟ್ಟ ಮಕ್ಕಳನ್ನು ವಾಹನದಲ್ಲಿ ಕುಳ್ಳಿರಿಸಿಕೊಂಡು ಚಾಲನೆ ಮಾಡುವ ವೇಳೆ ಪೋಷಕರು ಮತ್ತು ಕುಟುಂಬ ಸದಸ್ಯರು ಹಾಗೂ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನಗಳು ಸಂಚಾರ ನಿಯಮಗಳನ್ನು ಸಾರಾ ಸಗಟಾಗಿ ಉಲ್ಲಂಘನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ದಂಡವನ್ನು ಎರಡು ಪಟ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ. ಚಾಲಕರು ಮತ್ತು ವಾಹನ ಮಾಲೀಕರನ್ನು ಹೆಚ್ಚು ಜವಾಬ್ದಾರರನ್ನಾಗಿ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಆದರೆ ವಸ್ತುನಿಷ್ಠವಾಗಿ ಜಾರಿಯಾಗದಿದ್ದರೆ ಈ ಒಳ್ಳೆಯ ಶಾಸನಾತ್ಮಕ ಕ್ರಮದ ಜಾರಿ ಲಂಚಕ್ಕೆ ಮತ್ತೊಂದು ಮಾರ್ಗವಾಗಲಿದೆ ಎಂದು ರಸ್ತೆ ಸುರಕ್ಷತೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
"ಮೋಟಾರು ವಾಹನ ಕಾನೂನಿನ ಅಡಿಯಲ್ಲಿ 100ಕ್ಕೂ ಹೆಚ್ಚು ಅಪರಾಧ ಕೃತ್ಯಗಳು ಸೇರಿದ್ದರೂ ಈಗ ಕೂಡಾ ಸಂಚಾರ ಪೊಲೀಸರು ವೇಗದ ಚಾಲನೆ, ಪಾನಮತ್ತರಾಗಿ ಚಲನೆ ಮಾಡುವುದು, ಸಿಗ್ನಲ್ ಜಂಪ್, ಫೋನ್ ಬಳಕೆ ಮತ್ತು ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಧರಿಸದೇ ಇರುವುದು ಮುಂತಾದ ಬೆರಳೆಣಿಕೆಯ ತಪ್ಪುಗಳಿಗೆ ಮಾತ್ರ ದಂಡ ವಿಧಿಸುತ್ತಿದ್ದಾರೆ" ಎಂದು ವಿಶ್ಲೇಷಿಸಿದ್ದಾರೆ.