ಬಿಹಾರದಲ್ಲಿ ಶೇ. 34 ಕುಟುಂಬಗಳ ತಿಂಗಳ ಆದಾಯ ಕೇವಲ 6,000!
ಸಾಂದರ್ಭಿಕ ಚಿತ್ರ
ಪಾಟ್ನಾ : ಬಿಹಾರದಲ್ಲಿ ಶೇ. 34.13 ಕುಟುಂಬಗಳ ತಿಂಗಳ ಆದಾಯ ಕೇವಲ 6,000 ರೂ. ಎಂದು ಬಿಹಾರ ವಿಧಾನ ಸಭೆಯಲ್ಲಿ ಮಂಗಳವಾರ ಮಂಡಿಸಲಾದ ಜಾತಿ ಗಣತಿಯ ವಿಸ್ತೃತ ವರದಿ ಹೇಳಿದೆ.
ಸಂಸದೀಯ ವ್ಯವಹಾರಗಳ ಸಚಿವ ವಿಜಯ್ ಕುಮಾರ್ ಚೌಧರಿ ಅವರು ಮಂಡಿಸಿದ ವರದಿ ಪ್ರಕಾರ ರಾಜ್ಯದಲ್ಲಿ ಸುಮಾರು 2.97 ಕೋಟಿ ಕುಟುಂಬಗಳು ವಾಸಿಸುತ್ತಿವೆ. ಇದರಲ್ಲಿ 94 ಲಕ್ಷಕ್ಕೂ ಅಧಿಕ (34.13) ಬಡ ಕುಟುಂಬಗಳು.
ವರದಿಯ ಪ್ರಕಾರ ತಿಂಗಳಿಗೆ 6 ಸಾವಿರ ರೂ.ನಿಂದ 10 ಸಾವಿರ ರೂ. ವರೆಗೆ ಆದಾಯ ಇರುವ ಕುಟುಂಬಗಳ ಸಂಖ್ಯೆ ಶೇ. 29.61. ಅಂದರೆ, ರಾಜ್ಯದಲ್ಲಿ ತಿಂಗಳಿಗೆ 10 ಸಾವಿರ ರೂ. ವರೆಗೆ ಆದಾಯ ಇರುವ ಕುಟುಂಬಗಳ ಸಂಖ್ಯೆ ಶೇ. 63ಕ್ಕಿಂತ ಹೆಚ್ಚಿದೆ.
ತಿಂಗಳಿಗೆ 6 ಸಾವಿರ ಆದಾಯ ಇರುವ ಕುಟುಂಬಗಳ ಸಂಖ್ಯೆ 94,12,786 ಲಕ್ಷ. ತಿಂಗಳಿಗೆ 6 ಸಾವಿರ ರೂ.ಗಿಂತ ಹೆಚ್ಚು ಹಾಗೂ 10 ಸಾವಿರ ರೂ. ವರೆಗೆ ಆದಾಯ ಇರುವ ಕುಟುಂಬಗಳ ಸಂಖ್ಯೆ 81,91,390.
ತಿಂಗಳಿಗೆ 10 ಸಾವಿರ ರೂ.ಗಿಂತ ಹೆಚ್ಚು ಹಾಗೂ 20 ಸಾವಿರ ರೂ. ವರೆಗೆ ಆದಾಯ ಇರುವ ಕುಟುಂಬಗಳ ಸಂಖ್ಯೆ ಕೇವಲ ಶೇ. 18.06. ತಿಂಗಳಿಗೆ 20 ಸಾವಿರ ರೂ.ಗಿಂತ ಹೆಚ್ಚು ಹಾಗೂ 50 ಸಾವಿರ ರೂ. ವರೆಗೆ ಆದಾಯ ಇರುವ ಕುಟುಂಬಗಳ ಸಂಖ್ಯೆ ಶೇ. 9.83.
ವರದಿಯ ಪ್ರಕಾರ 50 ಲಕ್ಷಕ್ಕಿಂತ ಅಧಿಕ ಬಿಹಾರಿಗಳು ಜೀವಾನಾಧಾರ ಅಥವಾ ಉತ್ತಮ ಶಿಕ್ಷಣ ಅವಕಾಶಗಳಿಗಾಗಿ ಹೊರ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಸುಮಾರು 46 ಲಕ್ಷ ಬಿಹಾರಿಗಳು ಗಳಿಕೆಗಾಗಿ ಇತರ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. 2.17 ಲಕ್ಷ ಬಿಹಾರಿಗಳು ಗಳಿಕೆಗಾಗಿ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಇತರ ರಾಜ್ಯಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಬಿಹಾರಿಗಳ ಸಂಖ್ಯೆ ಸುಮಾರು 5.52 ಲಕ್ಷ. ವಿದೇಶಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಬಿಹಾರಿಗಳ ಸಂಖ್ಯೆ 27,000.
ಜಾತಿ ಸಮೀಕ್ಷೆಯ ಪ್ರಾಥಮಿಕ ಫಲಿತಾಂಶವನ್ನು ಅ. 2ರಂದು ಬಿಡುಗಡೆ ಮಾಡಲಾಗಿತ್ತು. ಜಾತಿ ಗಣತಿ ನಡೆಸಲು ಕೇಂದ್ರ ಹಿಂಜರಿದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರ ಸರಕಾರ ಈ ಜಾತಿ ಗಣತಿಗೆ ಆದೇಶ ನೀಡಿತ್ತು.