×
Ad

ನೀರು ಮಿಶ್ರಿತ ಡೀಸೆಲ್ ತುಂಬಿಸಿದ ಪೆಟ್ರೋಲ್ ಪಂಪ್ | ಕೆಟ್ಟು ನಿಂತ ಮಧ್ಯಪ್ರದೇಶದ ಮುಖ್ಯಮಂತ್ರಿಯ 19 ಬೆಂಗಾವಲು ವಾಹನಗಳು!

Update: 2025-06-27 20:11 IST

PC : PTI 

ಭೋಪಾಲ: ಭೋಪಾಲ್‌ನ ಪೆಟ್ರೋಲ್ ಪಂಪ್‌ ವೊಂದರಲ್ಲಿ ಶುಕ್ರವಾರ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್‌ ರ ಬೆಂಗಾವಲು ಪಡೆಯ 19 ಕಾರುಗಳಿಗೆ ಡೀಸೆಲ್ ತುಂಬಿಸಿದ ಬಳಿಕ ವಾಹನಗಳು ಕೆಟ್ಟು ನಿಂತಿದ್ದು, ಅವುಗಳನ್ನು ತಳ್ಳಿಕೊಂಡು ಹೋಗಬೇಕಾಯಿತು.

ನೀರು ಮಿಶ್ರಿತ ಡೀಸೆಲನ್ನು ವಾಹನಗಳಿಗೆ ತುಂಬಿಸಿರುವುದು ಘಟನೆಗೆ ಕಾರಣ ಎನ್ನಲಾಗಿದೆ. ಅಧಿಕಾರಿಗಳು ಪೆಟ್ರೋಲ್ ಪಂಪ್‌ ಗೆ ಬೀಗಮುದ್ರೆ ಹಾಕಿದ್ದು, ತನಿಖೆ ನಡೆಸುತ್ತಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಕ್ಕಾಗಿ ಮುಖ್ಯಮಂತ್ರಿ ರಟ್ಲಮ್‌ ಗೆ ಪ್ರಯಾಣಿಸಬೇಕಾಗಿತ್ತು. ಅದಕ್ಕಿಂತ ಗಂಟೆಗಳ ಮೊದಲು ಈ ಘಟನೆ ನಡೆದಿದೆ.

ವಾಹನಗಳನ್ನು ಎಳೆದುಕೊಂಡು ಹೋಗುವುದನ್ನು ತೋರಿಸುವ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಮುಖ್ಯಮಂತ್ರಿ ಕಚೇರಿಯು ಇದಕ್ಕೆ ಸ್ಪಷ್ಟನೆ ನೀಡಿದ್ದು, ಯಾವುದೇ ಭದ್ರತಾ ಲೋಪ ಸಂಭವಿಸಿಲ್ಲ ಎಂದು ಹೇಳಿದೆ. ಮುಖ್ಯಮಂತ್ರಿಯ ಪ್ರಯಾಣಕ್ಕೆ ಮುನ್ನ ನಡೆದ ತಾಲೀಮಿನ ವೇಳೆ ವಾಹನಗಳು ಕೆಟ್ಟು ನಿಂತವು ಹಾಗೂ ಶುಕ್ರವಾರ ಮಧ್ಯಾಹ್ನದ ವೇಳೆಗೆ ಬೇರೆ ವಾಹನಗಳನ್ನು ವ್ಯವಸ್ಥೆಗೊಳಿಸಲಾಯಿತು ಮತ್ತು ಮುಖ್ಯಮಂತ್ರಿಯ ರಟ್ಲಮ್ ಭೇಟಿ ಸರಾಗವಾಗಿ ಸಾಗಿತು ಎಂದು ಅದು ತಿಳಿಸಿದೆ.

ಪ್ರತಿ ಕಾರಿನಲ್ಲಿ ಸುಮಾರು 20 ಲೀಟರ್ ಡೀಸೆಲ್‌ ನಲ್ಲಿ 10 ಲೀಟರ್ ನೀರು ಇರುವುದು ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News