ಕೆಳ ಮಟ್ಟದ ರೈಲ್ವೆ ಉದ್ಯೋಗಗಳಲ್ಲಿ ಪಿಎಚ್‌ಡಿ, ಸ್ನಾತಕೋತ್ತರ ಪದವೀಧರರು : ವರದಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಬಿಟೆಕ್ ಪದವೀಧರರು ಸೇರಿದಂತೆ ಉನ್ನತ ಶಿಕ್ಷಣ ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ರೈಲ್ವೆಯಲ್ಲಿ ಗ್ಯಾಂಗ್‌ಮೆನ್, ಗೇಟ್‌ಮೆನ್ ಮತ್ತು ಸಹಾಯಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಉದ್ಯೋಗ ಭದ್ರತೆಯ ಭರವಸೆ ಎಂದು ಹಿರಿಯ ರೈಲ್ವೆ ಅಧಿಕಾರಿಯೋರ್ವರು ತಿಳಿಸಿರುವ ಬಗ್ಗೆ ವರದಿಯಾಗಿದೆ.
2022ರಿಂದ ಭಾರತೀಯ ರೈಲ್ವೆಯು Level-1 (L-1) ಹುದ್ದೆಗಳಿಗೆ 1,13,977 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದೆ. ಈ ಹುದ್ದೆಗಳಲ್ಲಿ ಗ್ಯಾಂಗ್‌ಮೆನ್ (ರೈಲು ಹಳಿಗಳ ನಿರ್ವಹಣೆ), ಗೇಟ್‌ಮೆನ್, ಪಾಯಿಂಟ್‌ಮೆನ್ ಹಾಗೂ ವಿವಿಧ ವಿಭಾಗಗಳ (ವಿದ್ಯುತ್, ಯಾಂತ್ರಿಕ, ಇಂಜಿನಿಯರಿಂಗ್, ಸಿಗ್ನಲಿಂಗ್ ಮತ್ತು ದೂರಸಂಪರ್ಕ) ಸಹಾಯಕರು ಸೇರಿದ್ದಾರೆ.
ಗ್ಯಾಂಗ್‌ಮೆನ್ (ಎಲ್-1) ಉದ್ಯೋಗ ರೈಲ್ವೆ ಉದ್ಯೋಗ ಶ್ರೇಣಿಯಲ್ಲಿ ಅತ್ಯಂತ ಕೆಳ ಮಟ್ಟದ ಹುದ್ದೆಯಾಗಿದೆ.
ರೈಲ್ವೆಯ ಎಲ್-1 ಹುದ್ದೆಗಳು ಕೈಕೆಲಸ ಆಧಾರಿತವಾಗಿದ್ದು, ಹಳಿಗಳನ್ನು ಉಪಕರಣಗಳಿಂದ ಸರಿಪಡಿಸುವುದು, ನೋಡಿಕೊಳ್ಳುವುದು ಸೇರಿವೆ. ಆದರೂ ಈ ಹುದ್ದೆಗಳಿಗೆ ಪದವೀಧರರು, ಸ್ನಾತಕೋತ್ತರ ಪದವೀಧರರು ಹಾಗೂ ಪಿಎಚ್‌ಡಿ ಮಾಡಿದವರೂ ಸೇರುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್-1 ಹುದ್ದೆಗೆ ಕನಿಷ್ಠ ಅರ್ಹತೆ 10ನೇ ತರಗತಿ ಅಥವಾ ಐಟಿಐ. 2022ರಿಂದ ನೇಮಕವಾದ 1,13,977 ಮಂದಿಯಲ್ಲಿ 52,709 ಮಂದಿ ಪದವೀಧರರು. ಇದಲ್ಲದೆ ಇಬ್ಬರು ಪಿಎಚ್‌ಡಿ ಪದವಿ ಪಡೆದವರು ಗ್ಯಾಂಗ್‌ಮೆನ್ ಹುದ್ದೆಗೆ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ ಗ್ಯಾಂಗ್‌ಮೆನ್ ಹುದ್ದೆಗೆ 26,831 ಮಂದಿ 10ನೇ ತರಗತಿ ಉತ್ತೀರ್ಣರಾದವರು, 17,680 ಮಂದಿ 12ನೇ ತರಗತಿ ಮತ್ತು 4,296 ಮಂದಿ ಸ್ನಾತಕೋತ್ತರ ಪದವೀಧರರು ಆಯ್ಕೆಯಾಗಿದ್ದಾರೆ.
ಈ ಹುದ್ದೆಗಳಿಗೆ 2,834 ಮಂದಿ ಡಿಪ್ಲೊಮಾ, 202 ಮಂದಿ ಸ್ನಾತಕೋತ್ತರ ಡಿಪ್ಲೊಮಾ, 1,407 ಪದವಿಪೂರ್ವ ಡಿಪ್ಲೊಮಾ ಹೊಂದಿರುವವರು ಸೇರಿದ್ದಾರೆ. ಕುತೂಹಲಕಾರಿಯಾಗಿ ಕೇವಲ 6,201 ಐಟಿಐ ಉತ್ತೀರ್ಣರಾದವರನ್ನು ನೇಮಕ ಮಾಡಲಾಗಿದೆ.
ನೇಮಕಾತಿಗೆ 1.11 ಕೋಟಿಗೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ದೇಶಾದ್ಯಂತ 551 ಕೇಂದ್ರಗಳಲ್ಲಿ ಹಂತ ಹಂತವಾಗಿ ನಡೆಸಲಾದ ಎಲ್ 1 ಪರೀಕ್ಷೆಗೆ 43 ಲಕ್ಷ ಉದ್ಯೋಗಾಕಾಂಕ್ಷಿಗಳು ಹಾಜರಾಗಿದ್ದರು.
ಅನುಕಂಪದ ಆಧಾರದ ಮೇಲೆ ನೇಮಕಗೊಂಡ ಕೆಲವು ಅಭ್ಯರ್ಥಿಗಳು ಅನಕ್ಷರಸ್ಥರು ಅಥವಾ 5 ರಿಂದ 9ನೇ ತರಗತಿಯವರೆಗೆ ಅಧ್ಯಯನ ಮಾಡಿದವರಾಗಿದ್ದಾರೆ. ರೈಲ್ವೆಯಲ್ಲಿನ 13 ಲಕ್ಷ ಹುದ್ದೆಗಳಲ್ಲಿ ಗ್ಯಾಂಗ್‌ಮೆನ್ ನಂತಹ ಹುದ್ದೆಗಳಿಗೆ ಹೆಚ್ಚಾಗಿ ನೇಮಕಾತಿ ಮಾಡಲಾಗುತ್ತದೆ. ಈ ಉದ್ಯೋಗಿಗಳು ರೈಲ್ವೆಯ ಸುಗಮ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ ಎಂದು ಅಧಿಕಾರಿಯೋರ್ವರು ತಿಳಸಿದ್ದಾರೆ.