ವಿಮಾನ ದುರಂತ | ಮಗಳೊಂದಿಗೆ ಮತ್ತೆ ಒಂದಾಗಲು ಕುರುಕ್ಷೇತ್ರದ ತಾಯಿಯ ಪ್ರಯಾಣ ದುರಂತದಲ್ಲಿ ಅಂತ್ಯ
PC : newindianexpress.com
ಹೊಸದಿಲ್ಲಿ: ಐವತ್ತೈದು ವರ್ಷದ ಅಂಜು ಶರ್ಮಾ ಅವರು ಲಂಡನ್ ನಲ್ಲಿರುವ ತನ್ನ ಹಿರಿಯ ಮಗಳೊಂದಿಗೆ ಮತ್ತೆ ಒಂದಾಗಲು ಎದುರು ನೋಡುತ್ತಿದ್ದರು. ಆದರೆ, ಅವರ ಪ್ರಯಾಣ ಗುರುವಾರ ದುರಂತದಲ್ಲಿ ಅಂತ್ಯಗೊಂಡಿದೆ. ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ 241 ಮಂದಿ ಪ್ರಯಾಣಿಕರಲ್ಲಿ ಅವರು ಕೂಡ ಸೇರಿದ್ದಾರೆ.
ಮೂಲತಃ ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ರಾಮಸರಣ್ ಮಾಜ್ರಾ ಗ್ರಾಮದವರಾದ ಅಂಜು ತೈಲೋದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಪತಿ ಪವನ್ ಶರ್ಮಾ ಅವರೊಂದಿಗೆ ವರ್ಷಗಳ ಹಿಂದೆ ವಡೋದರಕ್ಕೆ ಹೋಗಿದ್ದರು.
ಅವರು ಸಾಕಷ್ಟು ಸ್ಥಿತಿವಂತರಾಗಿದ್ದರು. ಅವರ ಸಹೋದರಿ ಮಿಲನ್ ಶರ್ಮಾ ಚಿತ್ರ ನಟಿ. ಅವರ ಹಿರಿಯ ಪುತ್ರಿ ನಿಮ್ಮಿ ಲಂಡನ್‌ನ ನಿವಾಸಿ. ಕಿರಿಯ ಪುತ್ರಿ ಹನಿ ಶರ್ಮಾ ವಡೋದರಾದಲ್ಲಿ ನೆಲೆ ಕಂಡು ಕೊಂಡಿದ್ದರು.
ಅಂಜು ನಿವೃತ್ತ ಸರಕಾರಿ ಉದ್ಯೋಗಿಯಾಗಿದ್ದ, ಅನಾರೋಗ್ಯ ಪೀಡಿತ ತನ್ನ ತಂದೆ ಜಗದೀಶ್ ಶರ್ಮಾ ಹಾಗೂ ತಾಯಿ ಸಂತೋಷಾ ಶರ್ಮಾ ಅವರೊಂದಿಗೆ ಕಾಲ ಕಳೆಯಲು ಅವರಿರುವ ಕುರುಕ್ಷೇತ್ರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು.
‘‘ಅವರು ತನ್ನ ಹೆತ್ತವರನ್ನು ಭೇಟಿಯಾಗಲು ಕೆಲವು ದಿನಗಳ ಹಿಂದೆ ಇಲ್ಲಿಗೆ ಬಂದಿದ್ದರು. ಅವರು 1990ರಲ್ಲಿ ವಿವಾಹವಾಗಿದ್ದರು. ಅವರು ಬಹುಕಾಲ ಪತಿಯೊಂದಿಗೆ ವಡೋದರದಲ್ಲಿ ಇದ್ದರು. ಕೆಲವು ವರ್ಷಗಳ ಹಿಂದೆ ಅವರ ಪತಿ ಪವನ್ ಶರ್ಮಾ ತೀರಿಕೊಂಡರು... ವಿಮಾನ ಹತ್ತುವ ಮುನ್ನ ಅವರು ತನ್ನ ಹೆತ್ತವರೊಂದಿಗೆ ವೀಡಿಯೊ ಕರೆ ಮಾಡಿ ಮಾತನಾಡಿದ್ದಾರೆ’’ ಎಂದು ಅಂಜು ಅವರ ಸೋದರ ಸಂಬಂಧಿ ವೈಭವ್ ಶರ್ಮಾ ತಿಳಿಸಿದ್ದಾರೆ.