43 ರೋಹಿಂಗ್ಯಾ ನಿರಾಶ್ರಿತರನ್ನು ಮ್ಯಾನ್ಮಾರ್‌ಗೆ ಬಲವಂತವಾಗಿ ಗಡೀಪಾರು ಮಾಡಿದ ಭಾರತ ಸರಕಾರ: ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಮಕ್ಕಳು, ಮಹಿಳೆಯರು, ವೃದ್ಧರು ಮತ್ತು ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಸೇರಿದಂತೆ 43 ರೋಹಿಂಗ್ಯಾ ನಿರಾಶ್ರಿತರನ್ನು ಭಾರತ ಸರಕಾರ ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಅರ್ಧದಲ್ಲಿ ಕೈಬಿಟ್ಟು ಮ್ಯಾನ್ಮಾರ್‌ಗೆ ಬಲವಂತವಾಗಿ ಗಡೀಪಾರು ಮಾಡಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.
ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಎನ್ ಕೋಟೀಶ್ವರ್ ಸಿಂಗ್ ಅವರ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಪ್ರಸ್ತುತ ರೋಹಿಂಗ್ಯಾ ನಿರಾಶ್ರಿತರ ಗಡೀಪಾರು ಮತ್ತು ಜೀವನ ಪರಿಸ್ಥಿತಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿದೆ.
ಮೇ 8ರಂದು ವಿಚಾರಣೆ ವೇಳೆ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನ್(UNHCR) ಕಾರ್ಡ್‌ಗಳನ್ನು ಹೊಂದಿರುವ ಕೆಲವು ನಿರಾಶ್ರಿತರನ್ನು ಮೇ 7ರ ತಡರಾತ್ರಿ ಪೊಲೀಸ್ ಅಧಿಕಾರಿಗಳು ಬಂಧಿಸಿ ಗಡೀಪಾರು ಮಾಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.
ಆದರೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು 2021ರ ಏಪ್ರಿಲ್ 8ರಂದು ಕಾನೂನಿನ ಪ್ರಕಾರ ವಿದೇಶಿಯರನ್ನು ಗಡೀಪಾರು ಮಾಡಲು ಅನುಮತಿ ನೀಡಿದ ಆದೇಶದ ಬಗ್ಗೆ ಕೋರ್ಟ್ ಗಮನಕ್ಕೆ ತಂದಾಗ ನ್ಯಾಯಾಲಯವು ಯಾವುದೇ ಮಧ್ಯಂತರ ನಿರ್ದೇಶನಗಳನ್ನು ನೀಡದೆ ಜುಲೈ 31ರಂದು ವಿಚಾರಣೆಗೆ ನಿಗದಿಪಡಿಸಿದೆ.
ಸುಪ್ರೀಂ ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ:
ದಿಲ್ಲಿಯಲ್ಲಿ ಇಬ್ಬರು ರೋಹಿಂಗ್ಯಾ ನಿರಾಶ್ರಿತರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ನಮ್ಮ ಗುಂಪಿನಲ್ಲಿದ್ದ ಕೆಲವರನ್ನು ಬಯೋಮೆಟ್ರಿಕ್ ಡೇಟಾ ಸಂಗ್ರಹಿಸುವ ನೆಪದಲ್ಲಿ ದಿಲ್ಲಿ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅವರನ್ನು ವ್ಯಾನ್‌ಗಳು ಮತ್ತು ಬಸ್‌ಗಳಲ್ಲಿ ಕರೆದುಕೊಂಡು ಹೋಗಿ 24 ಗಂಟೆಗಳ ಕಾಲ ವಿವಿಧ ಪೊಲೀಸ್ ಠಾಣೆಗಳಲ್ಲಿ ಬಂಧನದಲ್ಲಿಡಲಾಯಿತು. ನಂತರ ಅವರನ್ನು ದಿಲ್ಲಿಯ ಇಂದರ್ಲೋಕ್ ಬಂಧನ ಕೇಂದ್ರಕ್ಕೆ ವರ್ಗಾಯಿಸಲಾಯಿತು. ಅಲ್ಲಿಂದ ಪೋರ್ಟ್ ಬ್ಲೇರ್ಗ್ ವಿಮಾನದಲ್ಲಿ ಸಾಗಿಸಲಾಯಿತು. ಅಲ್ಲಿ ಅವರನ್ನು ನೌಕಾ ಹಡಗುಗಳಲ್ಲಿ ಬಲವಂತವಾಗಿ ಕೈಗಳನ್ನು ಕಟ್ಟಿ, ಕಣ್ಣುಗಳಿಗೆ ಬಟ್ಟೆ ಕಟ್ಟಿ ಸಾಗಿಸಲಾಗಿದೆ. ಅಧಿಕಾರಿಗಳ ಬಳಿ ಮ್ಯಾನ್ಮಾರ್‌ಗೆ ನಮ್ಮನ್ನು ಕಳುಹಿಸಬೇಡಿ, ಇಂಡೋನೇಷ್ಯಾದಲ್ಲಿ ಬಿಡುವಂತೆ ನಿರಾಶ್ರಿತರು ವಿನಂತಿಸಿದ್ದಾರೆ. ಆದರೆ ಅಧಿಕಾರಿಗಳು ಅವರನ್ನು ವಂಚಿಸಿದರು. ಅವರನ್ನು ಸುಳ್ಳು ಭರವಸೆ ನೀಡಿ ಅಂತಾರಾಷ್ಟ್ರೀಯ ಜಲಪ್ರದೇಶದ ನೀರಿನಲ್ಲಿ ಕೈಬಿಟ್ಟಿದ್ದಾರೆ. ನಿರಾಶ್ರಿತರಿಗೆ ಲೈಫ್ ಜಾಕೆಟ್‌ಗಳನ್ನು ಬಳಸಿಕೊಂಡು ಹತ್ತಿರದ ತೀರಕ್ಕೆ ಈಜುವಂತೆ ಬಲವಂತ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.