×
Ad

ಜಮ್ಮುಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆಯುವ ಬಗ್ಗೆ 3 ದಿನಗಳ ಮೊದಲೇ ಪ್ರಧಾನಿಗೆ ಗುಪ್ತಚರ ಮಾಹಿತಿ ಇತ್ತು: ಮಲ್ಲಿಕಾರ್ಜುನ ಖರ್ಗೆ ಆರೋಪ

Update: 2025-05-06 16:25 IST

ಮಲ್ಲಿಕಾರ್ಜುನ ಖರ್ಗೆ (PTI)

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭಾವ್ಯ ಭಯೋತ್ಪಾದಕ ದಾಳಿಯ ಬಗ್ಗೆ ಗುಪ್ತಚರ ವರದಿ ಬಂದಿತ್ತು. ಇದೇ ಕಾರಣಕ್ಕೆ ಅವರು ಜಮ್ಮುಕಾಶ್ಮೀರ ಭೇಟಿಯನ್ನು ರದ್ದುಗೊಳಿಸಿದ್ದರು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದರು.

ಎಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿದೆ. ಇದಕ್ಕೆ ಮೂರು ದಿನಗಳ ಮೊದಲೇ ಪ್ರಧಾನಿಗೆ ಗುಪ್ತಚರ ವರದಿಯನ್ನು ಕಳುಹಿಸಲಾಗಿದೆ ಎಂದು ಖರ್ಗೆ ಹೇಳಿದರು.

ʼಗುಪ್ತಚರ ವೈಫಲ್ಯವಿದೆ ಎಂಬುದನ್ನು ಸರಕಾರ ಒಪ್ಪಿಕೊಂಡಿದೆ. ಅವರು ಅದನ್ನು ಬಗೆಹರಿಸುತ್ತಾರೆ. ಈ ಬಗ್ಗೆ ಅವರಿಗೆ ಮೊದಲೇ ತಿಳಿದಿದ್ದರೆ, ಅವರು ಏಕೆ ಏನನ್ನೂ ಮಾಡಿಲ್ಲ? ದಾಳಿಗೆ ಮೂರು ದಿನಗಳ ಮೊದಲು ಪ್ರಧಾನಿ ಮೋದಿಗೆ ಗುಪ್ತಚರ ವರದಿಯನ್ನು ಕಳುಹಿಸಲಾಗಿದೆ ಎಂದು ನನಗೆ ಮಾಹಿತಿ ಸಿಕ್ಕಿದೆ. ಇದೇ ಕಾರಣಕ್ಕೆ ಅವರು ಕಾಶ್ಮೀರ ಭೇಟಿಯನ್ನು ರದ್ದುಗೊಳಿಸಿದ್ದರು. ನಾನು ಇದನ್ನು ಪತ್ರಿಕೆಯಲ್ಲೂ ಓದಿದ್ದೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಹತ್ಯೆ ಮಾಡಿದ ಭಯೋತ್ಪಾದಕ ದಾಳಿಗೆ ಗುಪ್ತಚರ ವೈಫಲ್ಯವೂ ಕಾರಣ ಎಂದು ಸರಕಾರ ಒಪ್ಪಿಕೊಂಡಿದೆ. ಅವರು ವ್ಯವಸ್ಥೆಯನ್ನು ಸುಧಾರಿಸುವುದಾಗಿ ಹೇಳಿದರು. ಅವರಿಗೆ ಅದರ ಬಗ್ಗೆ ತಿಳಿದಿದ್ದಾಗ ಏಕೆ ಉತ್ತಮ ವ್ಯವಸ್ಥೆಗಳನ್ನು ಮಾಡಲಿಲ್ಲ ಎಂಬುದು ನಮ್ಮ ಪ್ರಶ್ನೆ ಎಂದು ಖರ್ಗೆ ಹೇಳಿದರು.

ಎಪ್ರಿಲ್ 24ರಂದು ನಡೆದ ಸರ್ವಪಕ್ಷ ಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭದ್ರತಾ ಲೋಪ ಕಾರಣ ಎಂದು ಕೇಂದ್ರ ಸರಕಾರ ಒಪ್ಪಿಕೊಂಡಿರುವ ಬಗ್ಗೆ ವರದಿಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News