×
Ad

ಪ್ರಧಾನಿ ಲಡಾಖ್ ಜನರಿಗೆ ದ್ರೋಹ ಎಸಗಿದ್ದಾರೆ : ರಾಹುಲ್ ಗಾಂಧಿ

Update: 2025-09-30 20:41 IST

PC | PTI

ಹೊಸದಿಲ್ಲಿ, ಸೆ. 30: ಪ್ರಧಾನಿ ನರೇಂದ್ರ ಮೋದಿ ಲಡಾಖ್ ಜನರಿಗೆ ದ್ರೋಹ ಎಸಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.

ಲಡಾಖ್‌ನಲ್ಲಿ ಪೊಲೀಸ್ ಗುಂಡಿನ ದಾಳಿಯಲ್ಲಿ ನಾಲ್ವರು ಪ್ರತಿಭಟನಕಾರರು ಮೃತಪಟ್ಟಿರುವ ಕುರಿತು ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಲಡಾಖ್‌ನಲ್ಲಿ ಬುಧವಾರ ಮೃತಪಟ್ಟವರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡ ತ್ಸೆವಾಂಗ್ ಥರ್ಚಿನ್ ಕೂಡ ಸೇರಿದ್ದಾರೆ.

ದಕ್ಷಿಣ ಅಮೆರಿಕದ ನಾಲ್ಕು ದೇಶಗಳ ಪ್ರವಾಸದಲ್ಲಿರುವ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ, ಥರ್ಚಿನ್ ಅವರ ತಂದೆಯ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ‘‘ತಂದೆ ಸೇನೆಯಲ್ಲಿ, ಮಗ ಸೇನೆಯಲ್ಲಿ-ದೇಶಪ್ರೇಮ ಅವರ ರಕ್ತದಲ್ಲೇ ಹರಿಯುತ್ತಿದೆ’’ ಎಂದು ಹೇಳಿದ್ದಾರೆ.

ಆದರೆ, ದೇಶದ ಈ ವೀರ ಪುತ್ರನನ್ನು ಬಿಜೆಪಿ ಸರಕಾರ ಗುಂಡು ಹಾರಿಸಿ ಕೊಂದಿದೆ. ಕೇವಲ ಲಡಾಕ್ ಹಾಗೂ ಅಲ್ಲಿನ ಜನರ ಹಕ್ಕುಗಳಿಗಾಗಿ ಧ್ವನಿ ಎತ್ತಿರುವುದಕ್ಕಾಗಿ ಅವರನ್ನು ಹತ್ಯೆಗೈಯಲಾಗಿದೆ ಎಂದು ಅವರು ಹೇಳಿದ್ದಾರೆ.

ಆ ತಂದೆಯ ನೋವು ತುಂಬಿದ ಕಣ್ಣು ಒಂದು ಪ್ರಶ್ನೆ ಕೇಳಿತು, ದೇಶಕ್ಕೆ ಸೇವೆ ಸಲ್ಲಿಸಿರುವುದಕ್ಕೆ ಇಂದು ಇದು ಕೊಡುಗೆಯೇ ? ಎಂದು ರಾಹುಲ್ ಗಾಂಧಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.

‘‘ಲಡಾಖ್‌ನಲ್ಲಿ ನಡೆದ ಈ ಹತ್ಯೆಯ ಕುರಿತು ನಿಷ್ಪಕ್ಷಪಾತವಾಗಿ ನ್ಯಾಯಾಂಗ ತನಿಖೆ ನಡೆಸಬೇಕು ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ನಾವು ಆಗ್ರಹಿಸುತ್ತೇವೆ. ಮೋದಿ ಜಿ, ನೀವು ಲಡಾಖ್ ಜನರಿಗೆ ದ್ರೋಹ ಎಸಗಿದ್ದೀರಿ. ಅವರು ಅವರ ಹಕ್ಕುಗಳನ್ನು ಕೇಳುತ್ತಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸಿ. ಹಿಂಸಾಚಾರ ಹಾಗೂ ಭೀತಿಯ ರಾಜಕೀಯ ನಿಲ್ಲಿಸಿ’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News