ಪಹಲ್ಗಾಮ್ ಉಗ್ರ ದಾಳಿಗೆ ಭಾರತ ವಿಭಜನೆ ಕಾರಣ: ಪ್ರಧಾನಿ ಮೋದಿ
ನರೇಂದ್ರ ಮೋದಿ | PTI
ಗಾಂಧಿನಗರ (ಗುಜರಾತ್): 1947ರಲ್ಲಿ ದೇಶ ವಿಭಜನೆಯಾದ ಬಳಿಕ ದೇಶದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲರ ಸಲಹೆಯನ್ನು ಸ್ವೀಕರಿಸಿದ್ದರೆ ಭಾರತದ ವಿರುದ್ಧ ನಡೆಯುತ್ತಿರುವ ಭಯೋತ್ಪಾದನೆ ಚಟುವಟಿಕೆಗಳು ನಿಲ್ಲುತ್ತಿದ್ದವು ಎಂಬ ಅಭಿಪ್ರಾಯವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವ್ಯಕ್ತಪಡಿಸಿದ್ದಾರೆ.
ಗಾಂಧಿನಗರದಲ್ಲಿ ಸಾರ್ವಜನಿಕ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಕಿಸ್ತಾನಕ್ಕಾಗಿ ಕಾಶ್ಮೀರವನ್ನು ಆಕ್ರಮಿಸಿಕೊಳ್ಳಲು ದಾಳಿ ನಡೆಸಿದ್ದ ಮುಜಾಹಿದೀನ್ ಬಂಡುಕೋರರನ್ನು ಎದುರಿಸಬೇಕು ಎನ್ನುವ ಪಟೇಲ್ ರ ಸಲಹೆಯನ್ನು ನಿರ್ಲಕ್ಷಿಸಲಾಯಿತು ಎಂದು ಪ್ರಧಾನಿ ಹೇಳಿಕೊಂಡರು.
‘‘1947ರಲ್ಲಿ, ಭಾರತ ಮಾತೆಯನ್ನು ಹೋಳುಗಳಾಗಿ ವಿಭಜಿಸಲಾಯಿತು. ಸಂಕೋಲೆಗಳನ್ನು ಕಡಿಯಬೇಕಾಗಿತ್ತು, ಆದರೆ ಕೈಗಳನ್ನೇ ಕಡಿಯಲಾಯಿತು. ದೇಶವನ್ನು ಮೂರು ಭಾಗಗಳಾಗಿ ವಿಭಜಿಸಲಾಯಿತು. ಅದೇ ರಾತ್ರಿ ಮೊದಲ ಭಯೋತ್ಪಾದಕ ದಾಳಿ ಕಾಶ್ಮೀರದ ಮಣ್ಣಿನ ಮೇಲೆ ನಡೆಯಿತು. ಮುಜಾಹಿದೀನ್ ಹೆಸರಿನ ಭಯೋತ್ಪಾದಕರ ಸಹಾಯದಿಂದ ಪಾಕಿಸ್ತಾನವು ಭಾರತ ಮಾತೆಯ ಒಂದು ಭಾಗವನ್ನು ವಶಪಡಿಸಿಕೊಂಡಿತು. ಈ ಮುಜಾಹಿದೀನ್ ಗಳನ್ನು ಅದೇ ದಿನ ಕೊಂದಿದ್ದರೆ ಹಾಗೂ ಸರ್ದಾರ್ ಪಟೇಲರ ಸಲಹೆಯನ್ನು ಕೇಳಿದ್ದರೆ, ಕಳೆದ 75 ವರ್ಷಗಳಿಂದ ನಡೆಯುತ್ತಿರುವ ಈ ಭಯೋತ್ಪಾದನೆ ಕೃತ್ಯಗಳ ಸರಣಿಯು ಇರುತ್ತಿರಲಿಲ್ಲ’’ ಎಂಬುದಾಗಿ ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ಪಾಕಿಸ್ತಾನವು ಭಾರತದ ವಿರುದ್ಧ ಗಡಿಯಾಚೆಯ ಭಯೋತ್ಪಾದನೆಯ ರೂಪದಲ್ಲಿ ‘‘ಛಾಯಾ ಸಮರ’’ವನ್ನು ಆರಂಭಿಸಿದೆ ಎಂಬುದಾಗಿಯೂ ಮೋದಿ ಹೇಳಿದರು. ಪೂರ್ಣ ಪ್ರಮಾಣದ ಯುದ್ಧದಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡ ಬಳಿಕ ಅದು ಈ ತಂತ್ರಗಾರಿಕೆಗೆ ಶರಣಾಗಿದೆ ಎಂದರು. ‘‘ಅವರು ಅವಕಾಶ ಸಿಕ್ಕಿದಾಗಲೆಲ್ಲ ದಾಳಿ ನಡೆಸುತ್ತಾ ಸಾಗಿದರು, ನಾವು ಅದನ್ನು ಸಹಿಸಿಕೊಂಡು ಬಂದೆವು’’ ಎಂದು ಅವರು ನುಡಿದರು.
‘‘ಪಾಕಿಸ್ತಾನದ ಒತೆ ಯುದ್ಧ ಮಾಡುವುದು ಅನಿವಾರ್ಯವಾದಾಗ, ಭಾರತೀಯ ಸೇನಾ ಶಕ್ತಿಯು ಪಾಕಿಸ್ತಾನವನ್ನು ಮೂರು ಬಾರಿಯೂ ಸೋಲಿಸಿದೆ. ತಾನು ಯುದ್ಧದಲ್ಲಿ ಭಾರತವನ್ನು ಸೋಲಿಸಲಾರೆ ಎನ್ನುವುದು ಪಾಕಿಸ್ತಾನಕ್ಕೆ ಅರ್ಥವಾಯಿತು. ಹಾಗಾಗಿ, ಅದು ಭಾರತದ ವಿರುದ್ಧ ಛಾಯಾ ಸಮರ ಆರಂಭಿಸಿತು’’ ಎಂದರು.