×
Ad

ಭಾರತವು ಮಾವೋವಾದಿ ಭಯೋತ್ಪಾದನೆಯ ನಿರ್ಮೂಲನೆಯತ್ತ ಸಾಗುತ್ತಿದೆ: ಪ್ರಧಾನಿ ಮೋದಿ

Update: 2025-11-01 20:20 IST

 ನರೇಂದ್ರ ಮೋದಿ | Photo Credit : PTI 

ರಾಯಪುರ(ಛತ್ತೀಸ್‌ಗಡ),ನ.1: ಕಳೆದ 25 ವರ್ಷಗಳಲ್ಲಿ ಛತ್ತೀಸ್‌ಗಡದ ಪಯಣ ಸ್ಫೂರ್ತಿದಾಯಕವಾಗಿದೆ. ರಾಜ್ಯವು ಹಿಂದೆ ಮಾವೋವಾದಿ ಹಿಂಸಾಚಾರ ಮತ್ತು ಹಿಂದುಳಿದಿರುವಿಕೆಯೊಂದಿಗೆ ಗುರುತಿಸಿಕೊಂಡಿತ್ತು. ಆದರೆ ಅದು ಈಗ ಸಮೃದ್ಧಿ, ಭದ್ರತೆ ಮತ್ತು ಸ್ಥಿರತೆಯ ಸಂಕೇತವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಇಲ್ಲಿ ಹೇಳಿದರು.

ನವ ರಾಯಪುರ ಅಟಲ್ ನಗರದಲ್ಲಿ ನೂತನ ಛತ್ತೀಸ್‌ಗಡ ವಿಧಾನಸಭಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧಾನಭೆಯು ಕೇವಲ ಕಾನೂನುಗಳನ್ನು ರೂಪಿಸುವ ಸ್ಥಳವಲ್ಲ. ಅದು ರಾಜ್ಯದ ಭವಿಷ್ಯವನ್ನು ರೂಪಿಸುವ ಚೈತನ್ಯಶೀಲ ಕೇಂದ್ರವಾಗಿದೆ. ವಿಧಾನಸಭೆಯಿಂದ ಹೊರಹೊಮ್ಮುವ ಪ್ರತಿಯೊಂದೂ ಆಲೋಚನೆಯೂ ಸಾರ್ವಜನಿಕ ಸೇವಾ ಮನೋಭಾವ,ಅಭಿವೃದ್ಧಿಗೆ ಬದ್ಧತೆ ಮತ್ತು ಭಾರತವನ್ನು ಹೊಸ ಎತ್ತರಕ್ಕೊಯ್ಯುವ ವಿಶ್ವಾಸವನ್ನು ಪ್ರತಿಬಿಂಬಿಸಬೇಕು ಎಂದು ಹೇಳಿದರು.

‘ನೂತನ ವಿಧಾನಸಭಾ ಕಟ್ಟಡದ ನಿಜವಾದ ಮಹತ್ವವು ನಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುವ ಮತ್ತು ಪ್ರಜಾಪ್ರಭುತ್ವದ ಧ್ಯೇಯವನ್ನು ಎತ್ತಿ ಹಿಡಿಯುವ ನಮ್ಮ ಸಾಮೂಹಿಕ ಸಂಕಲ್ಪದಲ್ಲಿದೆ’ ಎಂದರು.

ಭಯೋತ್ಪಾದನೆ ಮತ್ತು ಎಡಪಂಥೀಯ ಉಗ್ರವಾದವನ್ನು ಎದುರಿಸುವಲ್ಲಿ ಭಾರತದ ಯಶಸ್ಸನ್ನು ಎತ್ತಿ ತೋರಿಸಿದ ಪ್ರಧಾನಿ, ಭಾರತವು ಭಯೋತ್ಪಾದಕರ ಬೆನ್ನುಮೂಳೆಯನ್ನು ಮುರಿದಿದೆ. ಈಗ ಛತ್ತೀಸ್‌ ಗಡ ಕೂಡ ಮಾವೋವಾದಿ ಹಿಂಸಾಚಾರದಿಂದ ಮುಕ್ತಗೊಳ್ಳುವ ನಿಟ್ಟಿನತ್ತ ಸಾಗುತ್ತಿದೆ ಎಂದರು.

ಈ ಪರಿವರ್ತನೆಗೆ ಛತ್ತೀಸ್‌ಗಡದ ಜನತೆಯ ಕಠಿಣ ಪರಿಶ್ರಮ ಮತ್ತು ಬಿಜೆಪಿ ಸರಕಾರಗಳ ದೂರದೃಷ್ಟಿಯ ನಾಯಕತ್ವ ಕಾರಣ ಎಂದು ಮೋದಿ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News