×
Ad

ಎರಡು ದಿನಗಳ ಭೇಟಿಗಾಗಿ ಗುಜರಾತ್ ಗೆ ಆಗಮಿಸಿದ ಪ್ರಧಾನಿ ಮೋದಿ; ವಡೋದರದಲ್ಲಿ ರೋಡ್‌ ಶೋ

Update: 2025-05-26 13:10 IST

Photo credit: X/@narendramodi

ವಡೋದರ: ತಮ್ಮ ತವರು ರಾಜ್ಯವಾದ ಗುಜರಾತ್ ಗೆ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಇಂದು ಬೆಳಗ್ಗೆ (ಸೋಮವಾರ) ವಡೋದರ ವಿಮಾನ ನಿಲ್ದಾಣಕ್ಕೆ ಬಂದಿಳಿದರು.

ತಮ್ಮ ಈ ಭೇಟಿಯ ಮೊದಲ ಭಾಗದಲ್ಲಿ ವಡೋದರದಲ್ಲಿ ಆಯೋಜನೆಗೊಂಡಿದ್ದ ಬೃಹತ್ ರೋಡ್ ಶೋನಲ್ಲಿ ಅವರು ಪಾಲ್ಗೊಂಡರು. ಈ ವೇಳೆ, ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ಭಾರತೀಯ ಸೇನೆಯ ಪರವಾಗಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು, ಪತ್ರಕರ್ತರಿಗೆ ದೈನಂದಿನ ಮಾಧ್ಯಮ ವಿವರಣೆ ನೀಡುತ್ತಿದ್ದ ಭಾರತೀಯ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ಕುಟುಂಬದ ಸದಸ್ಯರು ಪ್ರಧಾನಿ ನರೇಂದ್ರ ಮೋದಿಗೆ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.

ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಲ್ ಸೋಫಿಯಾ ಖುರೇಶಿ ಅವರ ಸಹೋದರಿ ಶಯ್ನಾ ಸುನ್ಸಾರಾ, “ನಮಗೆ ಪ್ರಧಾನಿ ಮೋದಿಯೊಂದಿಗೆ ಉತ್ತಮ ಭೇಟಿಯ ಅನುಭವವಾಯಿತು. ಅವರು ಮಹಿಳಾ ಸಬಲೀಕರಣಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಸೋಫಿಯಾ ಈಗ ನನ್ನ ಸಹೋದರಿ ಮಾತ್ರವಲ್ಲ; ದೇಶದ ಸಹೋದರಿ ಕೂಡಾ” ಎಂದು ಹರ್ಷ ವ್ಯಕ್ತಪಡಿಸಿದರು.

ತಮ್ಮ ಎರಡು ದಿನಗಳ ಈ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ದಿನ ಕ್ರಮವಾಗ ದಹೋಡ್ ಹಾಗೂ ಭುಜ್ ಗೆ ಭೇಟಿ ನೀಡಲಿದ್ದರೆ, ಎರಡನೆ ಮತ್ತು ಅಂತಿಮ ದಿನವಾದ ಮಂಗಳವಾದಂದು ಗುಜರಾತ್ ನ ರಾಜಧಾನಿ ಗಾಂಧಿನಗರಕ್ಕೆ ಭೇಟಿ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡು ದಿನಗಳ ಪ್ರವಾಸದಲ್ಲಿ ಮೊದಲನೆಯ ದಿನವಾದ ಇಂದು ದಹೋಡ್ ನಲ್ಲಿ ಭಾರತೀಯ ರೈಲ್ವೆಯ ಲೋಕೊಮೋಟಿವ್ ಉತ್ಪಾದನಾ ಘಟಕವನ್ನು ಉದ್ಘಾಟಿಸಲಿದ್ದಾರೆ. ಈ ಘಟಕವು 9000 ಅಶ್ವಶಕ್ತಿಯ ವಿದ್ಯುತ್ ಚಾಲಿತ ಲೋಕೊಮೊಟಿವ್ ಎಂಜಿನ್ ಗಳನ್ನು ಸ್ವದೇಶ ಹಾಗೂ ರಫ್ತು ಉದ್ದೇಶಕ್ಕಾಗಿ ಉತ್ಪಾದಿಸಲಿದೆ. ಈ ಲೋಕೊಮೊಟಿವ್ ಎಂಜಿನ್ ಗಳಿಂದಾಗಿ, ಭಾರತೀಯ ರೈಲ್ವೆಯ ಸರಕು ಸಾಗಣೆ ಸಾಮರ್ಥ್ಯವು ಏರಿಕೆಯಾಗಲಿದೆ ಎಂದು ಹೇಳಲಾಗಿದೆ.

ನಂತರ, ಭುಜ್ ಗೆ ಭೇಟಿ ನೀಡಲಿರುವ ಅವರು, 53,400 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ತಮ್ಮ ಎರಡು ದಿನಗಳ ಗುಜರಾತ್ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಒಟ್ಟಾರೆ 82,950 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

ಇದಾದ ನಂತರ, ಅವರು ಭುಜ್ ನಲ್ಲಿ ಆಯೋಜನೆಗೊಂಡಿರುವ ಸಾರ್ವಜನಿಕ ಸಮಾವೇಶವೊಂದರಲ್ಲೂ ಪಾಲ್ಗೊಳ್ಳಲಿದ್ದಾರೆ.

ತಮ್ಮ ಪ್ರವಾಸದ ಎರಡನೆ ಹಾಗೂ ಅಂತಿಮ ದಿನವಾದ ಮಂಗಳವಾರದಂದು ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಆಯೋಜನೆಗೊಂಡಿರುವ “ಗುಜರಾತ್ ನಗರಾಭಿವೃದ್ಧಿ ಕಥನ”ದ 20 ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅವರು, “2025ರ ನಗರಾಭಿವೃದ್ಧಿ ವರ್ಷ” ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News