ಕದನ ವಿರಾಮ ಘೋಷಣೆಯ ನಂತರ ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ
Photo credit: ANI
ಹೊಸದಿಲ್ಲಿ: ಶನಿವಾರ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಒಪ್ಪಂದ ಘೋಷಣೆಯಾದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಡ್ರೋನ್ ಗಳು ಹಾರಾಟ ನಡೆಸುತ್ತಿವೆ ಎಂಬ ವರದಿಗಳ ಬೆನ್ನಿಗೇ, ಇಂದು (ರವಿವಾರ) ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ ಅನಿಲ್ ಚೌಹಾಣ್ ಹಾಗೂ ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು.
ಗಡಿ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದ್ದು, ಶನಿವಾರ ರಾತ್ರಿ ನಡೆದ ಘಟನೆಗಳ ಕುರಿತು ಈ ಸಭೆಯಲ್ಲಿ ಪರಾಮರ್ಶೆ ನಡೆಸಲಾಯಿತು ಹಾಗೂ ಗಡಿ ಸುರಕ್ಷತೆಯನ್ನು ಮತ್ತಷ್ಟು ಬಿಗಿಗೊಳಿಸಲು ಅಗತ್ಯವಿರುವ ಕ್ರಮಗಳ ಕುರಿತು ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.
ಈ ನಡುವೆ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲಕ್ನೊದಲ್ಲಿನ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಉತ್ಪಾದನಾ ಘಟಕವನ್ನು ಇಷ್ಟರಲ್ಲೇ ವರ್ಚುಯಲ್ ಆಗಿ ಉದ್ಘಾಟಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈ ಘಟಕವನ್ನು ಪ್ರತಿ ವರ್ಷ 80ರಿಂದ 100 ಕ್ಷಿಪಣಿಗಳನ್ನು ಉತ್ಪಾದಿಸುವಂತೆ ನಿರ್ಮಿಸಲಾಗಿದೆ.
ಕೇಂದ್ರ ರಕ್ಷಣಾ ಸಚಿವಾಲಯವು ಕದನ ವಿರಾಮ ಘೊಷಣೆಯ ನಂತರದ ಪರಿಸ್ಥಿತಿಯ ಕುರಿತು ಮಾಹಿತಿ ಹಂಚಿಕೊಳ್ಳಲು ಇಷ್ಟರಲ್ಲೇ ಮಾಧ್ಯಮ ವಿವರಣೆ ಗೋಷ್ಠಿಯನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಲಾಗಿದೆ.