ಕಾಮನ್‌ವೆಲ್ತ್ ಸ್ಪೀಕರ್‌ಗಳು, ಸಭಾಧ್ಯಕ್ಷರ ಸಮ್ಮೇಳನ ಉದ್ಘಾಟಿಸಿದ ಪ್ರಧಾನಿ ಮೋದಿ; ಸ್ಪೀಕರ್ ಯುಟಿ ಖಾದರ್ ಭಾಗಿ
ಹೊಸದಿಲ್ಲಿ: ದಿಲ್ಲಿಯ ಸಂಸತ್ ಭವನದ ಸಂಕೀರ್ಣದಲ್ಲಿರುವ ಸಂವಿಧಾನ್ ಸದನದ ಸೆಂಟ್ರಲ್ ಹಾಲ್ ನಲ್ಲಿ ಕಾಮನ್ ವೆಲ್ತ್ ಸ್ಪೀಕರ್ ಗಳು ಮತ್ತು ಸಭಾಧ್ಯಕ್ಷರ 28ನೇ ಸಮ್ಮೇಳನ ನಡೆಯಿತು. ಸಮ್ಮೇಳನದಲ್ಲಿ ಕರ್ನಾಟಕದ ಸ್ಪೀಕರ್ ಯುಟಿ ಖಾದರ್ ಭಾಗವಹಿಸಿದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸ್ಪೀಕರ್ ಪಾತ್ರ ವಿಶಿಷ್ಟವಾಗಿದೆ. ಸ್ಪೀಕರ್ ಗೆ ಹೆಚ್ಚು ಮಾತನಾಡಲು ಅವಕಾಶವಿಲ್ಲ, ಆದರೆ ಅವರ ಜವಾಬ್ದಾರಿ ಇತರರ ಮಾತು ಗಳನ್ನು ಕೇಳುವುದು ಮತ್ತು ಪ್ರತಿಯೊಬ್ಬರೂ ಅವಕಾಶ ಪಡೆಯುವಂತೆ ನೋಡಿಕೊಳ್ಳುವುದು ಎಂದು ಹೇಳಿದರು. ತಾಳ್ಮೆಯು ಸ್ಪೀಕರ್ ಗಳ ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ. ಗದ್ದಲ ಮಾಡುವ ಮತ್ತು ಅತಿಯಾದ ಉತ್ಸಾಹ ಭರಿತ ಸದಸ್ಯರನ್ನು ಕೂಡ ಅವರು ನಗುನಗುತ್ತಾ ನಿರ್ವಹಿಸುತ್ತಾರೆ ಎಂದು ಪ್ರಧಾನಿ ಹೇಳಿದರು.
ಸ್ವಾತಂತ್ರ್ಯದ ನಂತರ 75 ವರ್ಷಗಳ ಕಾಲ ಈ ಕಟ್ಟಡವು ಭಾರತದ ಸಂಸತ್ತಾಗಿ ಕಾರ್ಯನಿರ್ವಹಿಸಿತ್ತು. ಇಲ್ಲಿ ದೇಶದ ಭವಿಷ್ಯವನ್ನು ರೂಪಿಸುವ ಹಲವಾರು ನಿರ್ಣಾಯಕ ನಿರ್ಧಾರಗಳು ಮತ್ತು ಚರ್ಚೆಗಳು ನಡೆದವು ಎಂದು ಪ್ರಧಾನಿ ಹೇಳಿದರು.
ಭಾರತವು ಈಗ ಈ ಐತಿಹಾಸಿಕ ಸ್ಥಳವನ್ನು ಸಂವಿಧಾನ್ ಸದನ ಎಂದು ಹೆಸರಿಸುವ ಮೂಲಕ ಪ್ರಜಾಪ್ರಭುತ್ವಕ್ಕೆ ಅರ್ಪಿಸಿದೆ ಎಂದು ಮೋದಿ ಹೇಳಿದರು. ಇತ್ತೀಚೆಗೆ ಭಾರತವು ತನ್ನ ಸಂವಿಧಾನದ ಅನುಷ್ಠಾನದ 75 ವರ್ಷಗಳನ್ನು ಆಚರಿಸಿದೆ. ಸಂವಿಧಾನ್ ಸದನದಲ್ಲಿ ಎಲ್ಲಾ ಗಣ್ಯ ಅತಿಥಿಗಳ ಉಪಸ್ಥಿತಿಯು ಭಾರತದ ಪ್ರಜಾಪ್ರಭುತ್ವಕ್ಕೆ ಬಹಳ ವಿಶೇಷವಾದ ಕ್ಷಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತದಲ್ಲಿ ಕಾಮನ್ವೆಲ್ತ್ ಸ್ಪೀಕರ್‌ಗಳು ಮತ್ತು ಸಭಾಧ್ಯಕ್ಷರ ಸಮ್ಮೇಳನ ನಡೆಯುತ್ತಿರುವುದು ಇದು ನಾಲ್ಕನೇ ಬಾರಿಯಾಗಿದೆ. ಸಂಸದೀಯ ಪ್ರಜಾಪ್ರಭುತ್ವದ ಪರಿಣಾಮಕಾರಿ ಅನುಷ್ಠಾನ ಈ ಸಮ್ಮೇಳನದ ಪ್ರಮುಖ ವಿಷಯ ಎಂದು ಪ್ರಧಾನಿ ಮೋದಿ ಹೇಳಿದರು.