×
Ad

ಯುದ್ಧ ವಿಮಾನ ತೇಜಸ್‌ನಲ್ಲಿ ಹಾರಾಟ ನಡೆಸಿದ ಪ್ರಧಾನಿ ಮೋದಿ

Update: 2023-11-25 15:01 IST

Photo: X/@narendramodi

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿನಲ್ಲಿ ದೇಶೀಯವಾಗಿ ನಿರ್ಮಿತ ಲೈಟ್‌ ಕಾಂಬ್ಯಾಟ್‌ ಯುದ್ಧವಿಮಾನ ತೇಜಸ್‌ನಲ್ಲಿ ಸಾರ್ಟಿ ಕೈಗೊಂಡರು.

ಇಂದು ಬೆಂಗಳೂರಿನ ಹಿಂದುಸ್ತಾನ್‌ ಎರೋನಾಟಿಕ್ಸ್‌ ಲಿಮಿಟೆಡ್‌ಗೆ ಭೇಟಿ ನೀಡಿದ ಪ್ರಧಾನಿ ಅಲ್ಲಿನ ಉತ್ಪಾದನಾ ಘಟಕದಲ್ಲಿ ನಡೆಯುತ್ತಿರುವ ಕೆಲಸಕಾರ್ಯಗಳನ್ನು ಪರಿಶೀಲಿಸಿದರು.

ನಂತರ ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಹಂಚಿಕೊಂಡರು. “ತೇಜಸ್‌ನಲ್ಲಿ ಸಾರ್ಟಿ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅನುಭವವು ತುಂಬಾ ಚೆನ್ನಾಗಿತ್ತು ಹಾಗೂ ನಮ್ಮ ದೇಶದಲ್ಲಿ ಇಂತಹ ನಿರ್ಮಾಣ ಸಾಮರ್ಥ್ಯಗಳ ಕುರಿತಂತೆ ನನ್ನ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ನಮ್ಮ ರಾಷ್ಟ್ರೀಯ ಸಾಮರ್ಥ್ಯದ ಬಗ್ಗೆ ಹೆಮ್ಮೆ ಮತ್ತು ಆಶಾಭಾವನೆ ಮೂಡಿಸಿದೆ,” ಎಂದು ಪ್ರಧಾನಿ ಟ್ವೀಟ್‌ ಮಾಡಿದ್ದಾರೆ.

ತೇಜಸ್‌ ಒಂದು ಸಿಂಗಲ್‌ ಸೀಟರ್‌ ಯುದ್ಧ ವಿಮಾನವಾಗಿದ್ದು ಪ್ರಧಾನಿ ಇಂದು ಕೈಗೊಂಡ ಸಾರ್ಟಿ ಟು-ಸೀಟರ್‌ ಮಾದರಿಯದ್ದಾಗಿದ್ದು ಮತ್ತು ಇದನ್ನು ವಾಯು ಪಡೆ ಮತ್ತು ನೌಕಾಪಡೆ ಬಳಸುತ್ತದೆ.

ತೇಜಸ್‌ ತನ್ನ ವರ್ಗದ ಅತ್ಯಂತ ಸಣ್ಣ ಮತ್ತು ಹಗುರ ವಿಮಾನವಾಗಿದೆ. ಭಾರತೀಯ ವಾಯುಪಡೆ ಬಳಿ ಈಗ 40 ತೇಜಸ್‌ ಎಂಕೆ-1 ಯುದ್ಧವಿಮಾನಗಳು ಹಾಗೂ ರೂ. 36,468 ಕೋಟಿ ವೆಚ್ಚದ 83 ತೇಜಸ್‌ ಎಂಕೆ-1ಎ ಯುದ್ಧವಿಮಾನಗಳಿಗೆ ಆರ್ಡರ್‌ ಇರಿಸಿದೆ.

ಇತ್ತೀಚೆಗೆ ಎಲ್‌ಸಿಎ ತೇಜಸ್‌ ದುಬೈ ಏರ್‌ ಶೋದಲ್ಲಿ ಪಾಲ್ಗೊಂಡಿತ್ತು. ಎಲ್‌ಸಿಎ ಅನ್ನು ಹೆಚ್‌ಎಎಲ್‌ ನಿರ್ಮಿಸಿದ್ದು ಭಾರತೀಯ ವಾಯು ಪಡೆಯ ಬಳಕೆಗೆ ಇದನ್ನು ಉದ್ದೇಶಿಸಲಾಗಿತ್ತಾದರೂ ನೌಕಾದಳಕ್ಕೆ ಸೂಕ್ತವಾದ ಮಾದರಿಯನ್ನೂ ಪರೀಕ್ಷಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News