ರಾಜಸ್ಥಾನ | 8ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ : ಹಿಂಸಾಚಾರಕ್ಕೆ ತಿರುಗಿದ ಗ್ರಾಮಸ್ಥರ ಪ್ರತಿಭಟನೆ
ಪೊಲೀಸರ ಮೇಲೆ ಕಲ್ಲು ತೂರಾಟ, ವಾಹನಗಳ ಧ್ವಂಸ
Photo credit: PTI
ಜೈಪುರ : ರಾಜಸ್ಥಾನದ ಉದಯಪುರದಲ್ಲಿ 8ರ ಹರೆಯದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಬಯಲಾಗುತ್ತಿದ್ದಂತೆ ಪ್ರತಿಭಟನೆ ಭುಗಿಲೆದ್ದಿದೆ. ಸ್ಥಳೀಯರು ಪೊಲೀಸ್ ವಾಹನಗಳಿಗೆ ಹಾನಿ ಮಾಡಿ ಕಲ್ಲು ತೂರಾಟ ನಡೆಸಿದ್ದಾರೆ. ಬಸ್‌ಗಳನ್ನು ಧ್ವಂಸಗೊಳಿಸಿ ರಸ್ತೆಗಳನ್ನು ತಡೆದಿದ್ದಾರೆ.
ರವಿವಾರ ಸಂಜೆ ಹೊಲಕ್ಕೆ ಹೋಗಿದ್ದ ಬಾಲಕಿ ಮೇಲೆ ಆರೋಪಿ ರಾಮಲಾಲ್ ಅತ್ಯಾಚಾರ ಎಸಗಿದ್ದಾನೆ. ಮನೆಗೆ ಹಿಂದಿರುಗಿದ ಬಾಲಕಿ ಘಟನೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಬಾಲಕಿಯನ್ನು ಮಹಾರಾಣ ಭೂಪಾಲ್ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಕುರಿತು ಪೋಕ್ಸೊ ಕಾಯ್ದೆಯಡಿಯಲ್ಲಿ ದಾಬೋಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರಾಮಲಾಲ್‌ನನ್ನು ಬಂಧಿಸಲಾಗಿದೆ.
ಘಟನೆಯಿಂದ ಆಕ್ರೋಶಿತ ಗ್ರಾಮಸ್ಥರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಚಿಕಿತ್ಸೆಯ ಸಮಯದಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ವದಂತಿ ಹರಡಿದ ಬಳಿಕ ಉದ್ವಿಗ್ನತೆ ಹೆಚ್ಚಾಗಿತ್ತು.
ಆರೋಪಿಗಳು ಪೊಲೀಸ್ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿದರು ಮತ್ತು ಸುಮಾರು 10 ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದರು. ಗುಂಪು ಉದ್ರಿಕ್ತಗೊಂಡು ಪಕ್ಕದ ರಸ್ತೆಯ ಮೂಲಕ ಹಾದುಹೋಗುತ್ತಿದ್ದ ಬಸ್‌ಗಳನ್ನು ಧ್ವಂಸಗೊಳಿಸಲು ಪ್ರಾರಂಭಿಸಿತು. ನಂತರ ರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿತು ಎಂದು ಪೊಲೀಸ್ ಮೂಲವೊಂದು ತಿಳಿಸಿದೆ.
ಎಸ್‌ಪಿ ಯೋಗೇಶ್ ಗೋಯಲ್ ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದು ತಿಳಿದು ಬಂದಿದೆ. ʼಇಂಡಿಯನ್ ಎಕ್ಸ್‌ಪ್ರೆಸ್ʼ ವರದಿ ಪ್ರಕಾರ, ಪರಿಸ್ಥಿತಿಯನ್ನು ನಿಯಂತ್ರಿಸಲು ಮೂರು ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.