×
Ad

ಅಯೋಧ್ಯೆಯಲ್ಲಿ ಮಳೆ ಅವಾಂತರ: ರಾಮಪಥದಲ್ಲಿ ಹೊಂಡಗುಂಡಿಗಳ ಸೃಷ್ಟಿ, ರಾಮ ಮಂದಿರದಲ್ಲಿ ಸೋರಿಕೆ

Update: 2024-06-29 11:46 IST

Photo: siasat.com

ಲಕ್ನೋ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೊಂಡ ಕೆಲವೇ ತಿಂಗಳುಗಳಲ್ಲಿ ಸುರಿದ ಮೊದಲ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿರುವುದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ನಗರದಲ್ಲಿ ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿರುವ ಜೊತೆಗೆ ಹೊಸದಾಗಿ ನಿರ್ಮಿಸಲಾದ ರಾಮ ಪಥದಲ್ಲೂ ಹಲವೆಡೆ ರಸ್ತೆ ಕುಸಿದಿದೆ ಎಂದು NDTV ವರದಿ ಮಾಡಿದೆ.

ಈ 14 ಕಿಮೀ ಉದ್ದದ ಪಥದಲ್ಲಿ ಹಲವೆಡೆ ಹೊಂಡಗುಂಡಿಗಳು ಸೃಷ್ಟಿಯಾದ ಬೆನ್ನಲ್ಲೇ ಸಂಬಂಧಿತ ಪ್ರಾಧಿಕಾರಗಳು ತಕ್ಷಣ ದುರಸ್ತಿಗೆ ಕ್ರಮಕೈಗೊಂಡಿವೆ. ಉತ್ತರ ಪ್ರದೇಶದ ಆದಿತ್ಯನಾಥ್‌ ಸರ್ಕಾರ ನಿರ್ಲಕ್ಷ್ಯಕ್ಕಾಗಿ ಈಗಾಗಲೇ 6 ಇಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ.

ಕೃತಕ ನೆರೆ ಸೃಷ್ಟಿಯಾದ ಬೆನ್ನಲ್ಲೇ ಮಳೆ ನೀರನ್ನು ಹೊರಕ್ಕೆ ಪಂಪ್‌ ಮಾಡುವ ಕೆಲಸ ನಡೆಸಲಾಗಿದೆ ಎಂದು ಅಯೋಧ್ಯೆಯ ಮೇಯರ್‌ ಗಿರೀಶ್‌ ಪತಿ ತ್ರಿಪಾಠಿ ಹೇಳಿದ್ದಾರೆ.

ಕಳೆದ ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ರಾಮ ಮಂದಿರದಲ್ಲೂ ಸೋರಿಕೆಯಾಗುತ್ತಿದೆ ಎಂದು ಹೇಳಲಾಗಿತ್ತು. ರಾಮ ಮಂದಿರದ ಮುಖ್ಯ ಅರ್ಚಕರು ಈ ಬಗ್ಗೆ ಹೇಳಿಕೊಂಡಿದ್ದರಲ್ಲದೆ ದೇವಳ ಆವರಣದಿಂದ ನೀರನ್ನು ಹೊರಹಾಕಲು ಯಾವುದೇ ಏರ್ಪಾಟು ಮಾಡಲಾಗಿಲ್ಲ ಎಂದು ದೂರಿದ್ದರು.

ಆದರೆ ಇದನ್ನು ದೇವಳ ಟ್ರಸ್ಟ್‌ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ನಿರಾಕರಿಸಿದ್ದರಲ್ಲದೆ, ದೇವಳದೊಳಗೆ ಒಂದೇ ಒಂದು ಹನಿ ಸೋರಿಕೆಯಾಗಿಲ್ಲ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಉತ್ತಮ ಏರ್ಪಾಟುಗಳಿವೆ ಎಂದಿದ್ದರು.

ಹೊರನೋಟಕ್ಕೆ ಛಾವಣಿಯಿಂದ ನೀರು ಸೋರಿಕೆಯಾಗುತ್ತಿದೆ ಎಂಬಂತೆ ಕಂಡುಬಂದಿದ್ದರೂ ಮೊದಲ ಅಂತಸ್ತಿನಲ್ಲಿ ನಡೆಯುತ್ತಿರುವ ಕಾಮಗಾರಿಯಿಂದ ಪೈಪ್‌ ಒಂದರಿಂದ ನೀರು ಹರಿಯುತ್ತಿದೆ ಎಂದು ಅವರು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News