ಸಲಿಂಗ ವಿವಾಹಕ್ಕೆ ಪೌರೋಹಿತ್ಯ: ಬತಿಂಡಾ ಗುರುದ್ವಾರದ ಅರ್ಚಕರ ವಜಾ
Photo:NDTV ಸಾಂದರ್ಭಿಕ ಚಿತ್ರ
ಅಮೃತಸರ: ಕಳೆದ ತಿಂಗಳು ಬತಿಂಡಾ ಗುರುದ್ವಾರದಲ್ಲಿ ಸಲಿಂಗ ವಿವಾಹವಾಗಿದ್ದ ಜೋಡಿಗಳಿಗೆ ಧಾರ್ಮಿಕ ವಿಧಿ-ವಿಧಾನಗಳ ಸೇವೆಯನ್ನು ಸಲ್ಲಿಸಿದ ಅಲ್ಲಿನ ಅರ್ಚಕರನ್ನು ಅಕಾಲ್ ತಕ್ತ್ ಸೇವೆಯಿಂದ ವಜಾಗೊಳಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸುಪ್ರೀಂ ಕೋರ್ಟ್ ಸಲಿಂಗ ವಿವಾಹದ ಕುರಿತು ತನ್ನ ತೀರ್ಪು ನೀಡುವ ಮುನ್ನಾ ದಿನವಾದ ಸೋಮವಾರದಂದು ಅಮೃತಸರದಲ್ಲಿ ನಡೆದಿದ್ದ “ಪಂಜ್ ಸಿಂಗ್ ಸಾಹಿಬಾನ್ಸ್” (ಸಿಖ್ ಪಂಚಾಯತರು) ಸಭೆಯ ನಂತರ ಸಿಖ್ಖರ ಉನ್ನತ ದೇವಾಲಯ ಮಂಡಳಿಯಾದ ಅಕಾಲ್ ತಖ್ತ್ ನ ಜತೇಂದರ್ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಸೆ. 18ರಂದು ಬತಿಂಡಾ ಜಿಲ್ಲೆಯ ಕಾಲ್ಗಿಧರ್ ಸಾಹಿಬ್ ಗುರುದ್ವಾರದಲ್ಲಿ ಇಬ್ಬರು ಪುರುಷರು ವಿವಾಹವಾಗಿದ್ದರು. ಇದರ ಬೆನ್ನಿಗೇ, ಅಕಾಲ್ ತಖ್ತ್, ಗುರುದ್ವಾರದ ಗ್ರಂಥೀಸ್(ಸಿಖ್ ಅರ್ಚಕರು), ವ್ಯವಸ್ಥಾಪಕ ಮಂಡಳಿ ಹಾಗೂ ‘ರಾಗೀಸ್’ (ಗುರ್ಬಾನಿ ಪ್ರತಿಪಾದಕರು)ಗಳನ್ನು ಸೇವೆಯಿಂದ ಅಮಾನತುಗೊಳಿಸಿತ್ತು.
ಸಿಖ್ ಸಿದ್ಧಾಂತಗಳ ಪ್ರಕಾರ, ಸಲಿಂಗ ವಿವಾಹಗಳನ್ನು ನೆರವೇರಿಸಲು ಅವಕಾಶವಿಲ್ಲ ಎಂದು ಸೋಮವಾರ ಹೇಳಿರುವ ಅಕಾಲ್ ತಖ್ತ್ ನ ಜತೇಂದರ್ ಗ್ಯಾನಿ ರಗ್ಬೀರ್ ಸಿಂಗ್, ಧಾರ್ಮಿಕ ಸೇವೆಗಳನ್ನು ಒದಗಿಸುವ ಕಾರ್ಯದಿಂದ ಅರ್ಚಕರನ್ನು ವಜಾಗೊಳಿಸಿದ್ದಾರೆ.
ಗುರುದ್ವಾರದ ಮುಖ್ಯ ಅರ್ಚಕ ಹರ್ದೇವ್ ಸಿಂಗ್, ಅರ್ಚಕ ಅಜೈಬ್ ಸಿಂಗ್, ಗುರ್ಬಾನಿ ಪ್ರತಿಪಾದಕ ಸಿಕಂದರ್ ಸಿಂಗ್ ಹಾಗೂ ತಬಲಾ ವಾದಕ ಸತ್ನಮ್ ಸಿಂಗ್ ಅವರನ್ನು ಸಿಖ್ಖರ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಐದು ವರ್ಷಗಳ ಕಾಲ ಕಪ್ಪು ಪಟ್ಟಿಗೆ ಸೇರಿಸಲಾಗಿದೆ.
ಅವರಿಗೆ ಯಾವುದೇ ಗುರುದ್ವಾರದಲ್ಲಿ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಸೇವೆಯನ್ನು ನೀಡಲು ಅವಕಾಶವಿರುವುದಿಲ್ಲ ಎಂದು ಸೋಮವಾರ ಜತೇಂದರ್ ತಿಳಿಸಿದ್ದಾರೆ. ಗುರುದ್ವಾರ ವ್ಯವಸ್ಥಾಪಕ ಮಂಡಳಿಯ ಸದಸ್ಯರು ಇನ್ನಾವುದೇ ಗುರುದ್ವಾರದಲ್ಲಿ ಯಾವುದೇ ಹುದ್ದೆ ಹೊಂದುವುದನ್ನು ನಿರ್ಬಂಧಿಸಲಾಗಿದೆ.
2005ರಲ್ಲಿ ಗ್ಯಾನಿ ಜೋಗಿಂದರ್ ಸಿಂಗ್ ವೇದಾಂತಿ ಅವರು ಜತೇಂದರ್ ಆಗಿದ್ದಾಗ ಸಲಿಂಗ ವಿವಾಹದ ವಿರುದ್ಧ ಅಕಾಲ್ ತಖ್ತ್ ಧಾರ್ಮಿಕ ಫರ್ಮಾನು ಹೊರಡಿಸಿತ್ತು.
ಆಗ ಅವರು ಯಾವುದೇ ಗುರುದ್ವಾರದಲ್ಲಿ ಸಲಿಂಗ ವಿವಾಹಗಳನ್ನು ನೆರವೇರಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದ್ದರು.