ಬಿಹಾರ | ಮುಖ್ಯಮಂತ್ರಿ ಮಹಿಳಾ ರೋಜ್ ಗಾರ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ : 75 ಲಕ್ಷ ಮಹಿಳೆಯರ ಖಾತೆಗೆ ತಲಾ 10,000 ರೂ ಜಮೆ
ನರೇಂದ್ರ ಮೋದಿ | PTI
ಪಾಟ್ನಾ: ವಿಧಾನಸಭಾ ಚುನಾವಣಾ ರಾಜ್ಯವಾದ ಬಿಹಾರದಲ್ಲಿ ಮುಖ್ಯಮಂತ್ರಿ ಮಹಿಳಾ ರೋಜ್ ಗಾರ್ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯದ 75 ಲಕ್ಷ ಮಹಿಳೆಯರ ಖಾತೆಗೆ ತಲಾ 10,000 ರೂ. ಜಮೆ ಮಾಡಿದರು.
7,500 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಸ್ವಯಂ ಉದ್ಯೋಗದ ಮೂಲಕ ಮಹಿಳೆಯರ ಸಬಲೀಕರಣ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಬಿಹಾರದ ಎನ್ಡಿಎ ಸರಕಾರ ಹೇಳಿದೆ.
ಈ ಯೋಜನೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹಾಗೂ ಸಚಿವರು ಹಾಜರಿದ್ದರು. ಭಾರಿ ಪ್ರಮಾಣದ ಫಲಾನುಭವಿ ಮಹಿಳೆಯರೂ ಸಹ ಈ ವಿಡಿಯೊ ಕಾನ್ಫರೆನ್ಸ್ ಗೆ ಸೇರ್ಪಡೆಯಾಗಿದ್ದರು.
“ಈ ಯೋಜನೆಯಡಿ ಪ್ರತಿ ಕುಟುಂಬದ ಓರ್ವ ಮಹಿಳೆಗೆ ಅವರ ಆಯ್ಕೆಯ ಜೀವನೋಪಾಯ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ. ಇದು ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸಬಲೀಕರಣವನ್ನು ಉತ್ತೇಜಿಸುತ್ತದೆ” ಎಂದು ಸರಕಾರದ ಅಧಿಕೃತ ಪ್ರಕಟನೆಯಲ್ಲಿ ಹೇಳಲಾಗಿದೆ.