ತಬ್ಲೀಗಿ ಮರ್ಕಝ್ ಮುಖ್ಯಸ್ಥರ ವಿರುದ್ಧದ ಕೋವಿಡ್ ಪ್ರಕರಣ: ಐದು ವರ್ಷಗಳ ಬಳಿಕ "ಆಕ್ಷೇಪಾರ್ಹವಾದುದೇನೂ ಕಂಡು ಬಂದಿಲ್ಲ" ಎಂದ ತನಿಖಾಧಿಕಾರಿ
ಮೌಲಾನಾ ಮುಹಮ್ಮದ್ ಸಾದ್ (Photo:X)
ಹೊಸದಿಲ್ಲಿ: ಮರ್ಕಝ್ ನಿಝಾಮುದ್ದೀನ್ ಮುಖ್ಯಸ್ಥ ಮೌಲಾನಾ ಮುಹಮ್ಮದ್ ಸಾದ್ ಕಂಧಾಲ್ವಿ ಮತ್ತು ಇತರರು ದಿಲ್ಲಿಯಲ್ಲಿ ಅಂತರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುವ ಮೂಲಕ ಕೋವಿಡ್ ಹರಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಾದ ಐದು ವರ್ಷಗಳ ಬಳಿಕ ದಿಲ್ಲಿ ಪೋಲಿಸ್ ಕ್ರೈಂ ಬ್ರ್ಯಾಂಚ್‌ನ ಪ್ರಸ್ತುತ ತನಿಖಾ ಅಧಿಕಾರಿ, ಸಾದ್ ಅವರ ಲ್ಯಾಪ್‌ಟಾಪ್‌ನಿಂದ ವಶಪಡಿಸಿಕೊಳ್ಳಲಾದ ಭಾಷಣದಲ್ಲಿ ‘ಆಕ್ಷೇಪಾರ್ಹವಾದ ಏನೂ’ ಕಂಡು ಬಂದಿಲ್ಲ ಎಂದು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
2020,ಮಾ.31ರಂದು ಹಝರತ್ ನಿಝಾಮುದ್ದೀನ್ ಪೋಲಿಸ್ ಠಾಣೆಯ ಆಗಿನ ಎಸ್‌ಎಚ್‌ಒ ದೂರಿನ ಆಧಾರದಲ್ಲಿ ಸಾದ್ ಮತ್ತು ಇತರರ ವಿರುದ್ಧ ಕೊಲೆಯಲ್ಲದ ನರಹತ್ಯೆ ಆರೋಪದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಸಾದ್ ಅವರ ಆಡಿಯೊ ರೆಕಾರ್ಡಿಂಗ್ 2020,ಮಾ.21ರಂದು ವಾಟ್ಸ್‌ಆ್ಯಪ್‌ನಲ್ಲಿ ಪ್ರಸಾರಗೊಂಡಿತ್ತು ಮತ್ತು ಅದರಲ್ಲಿ ಅವರು ಲಾಕ್‌ಡೌನ್ ಮತ್ತು ಸುರಕ್ಷಿತ ಅಂತರವನ್ನು ಧಿಕ್ಕರಿಸಿ ಮರ್ಕಝ್ ನ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ತನ್ನ ಅನುಯಾಯಿಗಳಿಗೆ ಸೂಚಿಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಬಲ್ಲ ಮೂಲಗಳ ಪ್ರಕಾರ, ಸಾದ್ ಅವರು ಈವರೆಗೆ ತನಿಖೆಯಲ್ಲಿ ಭಾಗಿಯಾಗಿಲ್ಲ ಎಂದು ಪ್ರಸ್ತುತ ತನಿಖಾಧಿಕಾರಿ ತನ್ನ ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ದತ್ತಾಂಶಗಳನ್ನು ಹೊರಗೆ ತೆಗೆಯಲು ಒಂದು ಲ್ಯಾಪ್‌ಟಾಪ್ ಮತ್ತು ಕೆಲವು ವಿದ್ಯುನ್ಮಾನ ಉಪಕರಣಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿಗಾಗಿ ಈಗಲೂ ಕಾಯಲಾಗುತ್ತಿದೆ. ಸಾದ್ ಅವರ ಭಾಷಣಗಳನ್ನು ಲ್ಯಾಪ್‌ಟಾಪ್‌ನಲ್ಲಿ ಸಂಗ್ರಹಿಸಲಾಗಿತ್ತು ಮತ್ತು ಅವುಗಳನ್ನು ತನಿಖೆಯ ಸಂದರ್ಭದಲ್ಲಿ ಈ ಹಿಂದೆಯೇ ವಿಶ್ಲೇಷಿಸಲಾಗಿತ್ತು. ಅವುಗಳಲ್ಲಿ ಆಕ್ಷೇಪಾರ್ಹವಾದ ಏನೂ ಕಂಡು ಬಂದಿಲ್ಲ ಎಂದು ತನಿಖಾ ವರದಿಯನ್ನು ಉಲ್ಲೇಖಿಸಿ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಕೇವಲ ಮರ್ಕಝ್ ನಲ್ಲಿ ವಾಸವಾಗಿದ್ದುದು ಸಾಂಕ್ರಾಮಿಕ ಆರಂಭಗೊಂಡಾಗ ಜನರ ಚಲನವಲನಗಳನ್ನು ಮೊಟಕುಗೊಳಿಸಿ ಸರಕಾರವು ಹೊರಡಿಸಿದ್ದ ನಿಷೇಧಾಜ್ಞೆಗಳ ಉಲ್ಲಂಘನೆಯಾಗುವುದಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ಕಳೆದ ತಿಂಗಳು ಎತ್ತಿ ಹಿಡಿದಿತ್ತು. ತಬ್ಲಿಘಿ ಜಮಾಅತ್‌ನೊಂದಿಗೆ ಗುರುತಿಸಿಕೊಂಡಿದ್ದ 70 ಭಾರತೀಯರ ವಿರುದ್ಧ 16 ಎಫ್‌ಐಆರ್‌ಗಳು ಮತ್ತು ದೋಷಾರೋಪ ಪಟ್ಟಿಗಳನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು.
ಅಂತರಾಷ್ಟ್ರೀಯ ಇಸ್ಲಾಮಿಕ್ ಧಾರ್ಮಿಕ ಸಂಘಟನೆಯಾಗಿರುವ ಜಮಾತ್ 2020,ಮಾ.13 ಮತ್ತು 15ರ ನಡುವೆ ದಿಲ್ಲಿಯಲ್ಲಿ ಅಂತರರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುವ ಮೂಲಕ ಕೋವಿಡ್ ಹರಡುತ್ತಿದೆ ಎಂದು ಆರೋಪಿಸಲಾಗಿತ್ತು.
36 ದೇಶಗಳಿಗೆ ಸೇರಿದ 952 ವಿದೇಶಿ ಪ್ರಜೆಗಳ ವಿರುದ್ಧ ದೋಷಾರೋಪ ಪಟ್ಟಿಗಳನ್ನು ಸಲ್ಲಿಸಲಾಗಿತ್ತು.
44 ಆರೋಪಿಗಳು ವಿಚಾರಣೆ ಎದುರಿಸುವುದನ್ನು ಆಯ್ಕೆ ಮಾಡಿಕೊಂಡಿದ್ದರೆ, 908 ಆರೋಪಿಗಳು ತಪ್ಪೊಪ್ಪಿಕೊಂಡು 4,000 ರೂ.ಗಳಿಂದ 10.000 ರೂ.ವರೆಗೆ ದಂಡಗಳನ್ನು ಪಾವತಿಸಿದ್ದರು.