ಬಿಹಾರದಲ್ಲಿ ಕೌಟುಂಬಿಕ ಹಿಂಸಾ ಸಂತ್ರಸ್ತ ಮಹಿಳೆಯರಿಗೆ ಬೆಂಬಲಕ್ಕಾಗಿ 140 ‘ರಕ್ಷಣಾ ಅಧಿಕಾರಿ’ಗಳ ನೇಮಕ
ಸಾಂದರ್ಭಿಕ ಚಿತ್ರ| PC : indianexpress.com
ಪಾಟ್ನಾ: ಕೌಟುಂಬಿಕ ಹಿಂಸಾ ಸಂತ್ರಸ್ತ ಮಹಿಳೆಯರಿಗೆ ಹೆಚ್ಚು ಪರಿಣಾಮಕಾರಿಯಾಗಿ ಬೆಂಬಲ ನೀಡಲು ರಾಜ್ಯಾದ್ಯಂತ 140 ಪೂರ್ಣಾವಧಿ ‘‘ರಕ್ಷಣಾ ಅಧಿಕಾರಿ’’ಗಳನ್ನು ನೇಮಿಸಲು ಬಿಹಾರ ಸರಕಾರ ನಿರ್ಧರಿಸಿದೆ.
ಈ ಉದ್ದೇಶಕ್ಕಾಗಿಯೇ ಅಧಿಕಾರಿಗಳ ಪ್ರತ್ಯೇಕ ಶ್ರೇಣಿಯೊಂದನ್ನು ಸೃಷ್ಟಿಸಲು ಸಮಾಜ ಕಲ್ಯಾಣ ಇಲಾಖೆಯು ನಿರ್ಧರಿಸಿದೆ ಹಾಗೂ ಅದರ ಅಡಿಯಲ್ಲಿ ಉಪವಿಭಾಗೀಯ, ಜಿಲ್ಲಾ ಮತ್ತು ರಾಜ್ಯ ಮಟ್ಟದ ರಕ್ಷಣಾ ಅಧಿಕಾರಿಗಳನ್ನು ನೇಮಿಸಲಾಗುವುದು. ರಾಜ್ಯದಲ್ಲಿ ಹೆಚ್ಚುತ್ತಿರುವ ಕೌಟುಂಬಿಕ ಹಿಂಸೆ ಪ್ರಕರಣಗಳ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
‘‘ಕೌಟುಂಬಿಕ ಹಿಂಸೆ ಪ್ರಕರಣಗಳೊಂದಿಗೆ ಪರಿಣಾಮಕಾರಿಯಾಗಿ ವ್ಯವಹರಿಸಲು ಪೂರ್ಣಾವಧಿ ರಕ್ಷಣಾ ಅಧಿಕಾರಿಗಳನ್ನು ನೇಮಿಸಲು ಸಮಾಜ ಕಲ್ಯಾಣ ಇಲಾಖೆಯು ನಿರ್ಧರಿಸಿದೆ’’ ಎಂದು ಪಿಟಿಐಯೊಂದಿಗೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬಿಹಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಹಾಗೂ ಆಡಳಿತ ನಿರ್ದೇಶಕಿ ಹರ್ಜೋತ್ ಕೌರ್ ಬಮ್‌ಹ್ರಾ ಹೇಳಿದರು.
ಮಹಿಳೆಯರ ಕೌಟುಂಬಿಕ ಹಿಂಸೆ ಪ್ರಕರಣಗಳಿಗೆ ಸಂಬಂಧಿಸಿ, ರಕ್ಷಣಾ ಅಧಿಕಾರಿಗಳು ಮ್ಯಾಜಿಸ್ಟ್ರೇಟರ ಕರ್ತವ್ಯ ನಿರ್ವಹಣೆಯಲ್ಲಿ ನೆರವು ನೀಡುವರು. ಜೊತೆಗೆ ಸಂತ್ರಸ್ತ ಮಹಿಳೆಯರಿಗೆ ಗಾಯವಾಗಿದ್ದರೆ, ಅವರ ವೈದ್ಯಕೀಯ ಪರೀಕ್ಷೆಗೆ ವ್ಯವಸ್ಥೆ ಮಾಡುವರು ಹಾಗೂ ವೈದ್ಯಕೀಯ ವರದಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆ ಮತ್ತು ಮ್ಯಾಜಿಸ್ಟ್ರೇಟ್‌ರಿಗೆ ತಲುಪಿಸುವರು ಎಂದು ಅವರು ತಿಳಿಸಿದರು.