ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ದಿಲ್ಲಿ ಸರಕಾರ: ಹಳೆಯ ಕಾರು, ಬೈಕ್ ಗಳಿಗೆ ಇಂಧನ ಮಾರಾಟ ನಿಷೇಧದ ಹಿಂದೆಗೆತ
ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ವ್ಯಾಪಕ ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಜೀವಿತಾವಧಿ ಮುಗಿದ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳು ಹಾಗೂ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳಿಗೆ ಇಂಧನ ಮಾರಾಟ ಮಾಡುವುದರ ಮೇಲೆ ವಿಧಿಸಲಾಗಿದ್ದ ವಿವಾದಾತ್ಮಕ ನಿಷೇಧವನ್ನು ತಡೆಹಿಡಿಯಲು ದಿಲ್ಲಿ ಸರಕಾರ ನಿರ್ಧರಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಪರಿಸರ ಸಚಿವ ಮಜಿಂದರ್ ಸಿಂಗ್ ಸಿರ್ಸಾ, ತಾಂತ್ರಿಕ ಸವಾಲುಗಳು ಹಾಗೂ ಸಂಕೀರ್ಣ ವ್ಯವಸ್ಥೆಗಳ ಕಾರಣಕ್ಕೆ ಈ ಇಂಧನ ನಿಷೇಧವನ್ನು ಜಾರಿಗೊಳಿಸುವುದು ಕಷ್ಟಕರವಾಗಿದೆ. ತಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡಿರುವ ಮಾಲಕರನ್ನು ಶಿಕ್ಷಿಸುವ ಬದಲು, ಕಳಪೆಯಾಗಿ ನಿರ್ವಹಿಸಲಾಗಿರುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಾಗುವಂಥ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.
ಜೀವಿತಾವಧಿ ಮೀರಿದ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳಿಗೆ ಇಂಧನ ಮಾರಾಟವನ್ನು ನಿಷೇಧಿಸುವ ದಿಲ್ಲಿ ಸರಕಾರದ ನಿರ್ಧಾರದ ವಿರುದ್ಧ ವ್ಯಾಪಕ ಸಾರ್ವತ್ರಿಕ ಆಕ್ರೋಶ ವ್ಯಕ್ತವಾದ ಬೆನ್ನಿಗೇ, ದಿಲ್ಲಿ ಸರಕಾರದಿಂದ ಈ ನಿರ್ಧಾರ ಹೊರ ಬಿದ್ದಿದೆ.