2016ರಿಂದ 12 ಲಕ್ಷ ಕೋಟಿ ರೂ.ಗಳ ಕೆಟ್ಟ ಸಾಲಗಳನ್ನು ರೈಟ್ ಆಫ್ ಮಾಡಿದ ಸರಕಾರಿ ಬ್ಯಾಂಕುಗಳು
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಸಾರ್ವಜನಿಕ ವಲಯದ ಬ್ಯಾಂಕುಗಳು 2015-16ರಿಂದ ಒಟ್ಟು 12 ಲಕ್ಷ ಕೋಟಿ ರೂ.ಗೂ ಅಧಿಕ ಕೆಟ್ಟ ಸಾಲಗಳನ್ನು ರೈಟ್ ಆಫ್ ಮಾಡಿವೆ, ಇದೇ ವೇಳೆ ಅವುಗಳ ಒಟ್ಟು ಅನುತ್ಪಾದಕ ಆಸ್ತಿ(ಎನ್‌ಪಿಎ)ಗಳ ಅನುಪಾತವು ಮಾ.31,2021ರಲ್ಲಿದ್ದ ಶೇ.9.11ರಿಂದ ಮಾ.31,2025ಕ್ಕೆ ಶೇ.2.58ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಸಹಾಯಕ ವಿತ್ತಸಚಿವ ಪಂಕಜ ಚೌಧರಿ ಅವರು ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ಆದಾಗ್ಯೂ, ಈ ಸಾಲಗಳನ್ನು ಆಯಾ ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್‌ಗಳಿಂದ ತೊಡೆದು ಹಾಕಲಾಗಿದೆ ಅಷ್ಟೇ, ಆದರೆ ಸುಸ್ತಿದಾರರಿಂದ ಸಾಲಬಾಕಿ ವಸೂಲಾತಿಗೆ ಬ್ಯಾಂಕುಗಳ ಪ್ರಕ್ರಿಯೆಗಳು ನಿರಂತರವಾಗಿ ಮುಂದುವರಿಯುತ್ತಿವೆ ಎಂದು ಸ್ಪಷ್ಟಪಡಿಸಿದ ಸಚಿವರು, ರೈಟ್‌ಆಫ್ ಸಾಲಗಳನ್ನು ಮನ್ನಾ ಮಾಡುವುದಿಲ್ಲ ಮತ್ತು ಅದರಿಂದ ಸಾಲಗಾರರಿಗೆ ಯಾವುದೇ ಲಾಭವಾಗುವುದಿಲ್ಲ. ಸಾಲಗಾರರು ಮರುಪಾವತಿಗೆ ಜವಾಬ್ದಾರರಾಗಿರುತ್ತಾರೆ ಮತ್ತು ಬ್ಯಾಂಕುಗಳು ಈ ಸುಸ್ತಿ ಸಾಲ ಖಾತೆಗಳಿಗೆ ಸಂಬಂಧಿಸಿದಂತೆ ಆರಂಭಿಸಿರುವ ಮರುವಸೂಲಾತಿ ಕಾನೂನು ಕ್ರಮಗಳನ್ನು ಮುಂದುವರಿಸುತ್ತವೆ ಎಂದು ತಿಳಿಸಿದರು. ಸಿವಿಲ್ ನ್ಯಾಯಾಲಯಗಳು ಅಥವಾ ಸಾಲ ವಸೂಲಾತಿ ನ್ಯಾಯಮಂಡಳಿಗಳಲ್ಲಿ ಮೊಕದ್ದಮೆ ದಾಖಲು, ಸರ್ಫೇಸಿ ಕಾಯ್ದಯಡಿ ಕ್ರಮ, ಇನಸಾಲ್ವೆನ್ಸಿ ಆ್ಯಂಡ್ ಬ್ಯಾಂಕ್‌ರಪ್ಟ್ಸಿಕೋಡ್ (ಐಬಿಸಿ)ನಡಿ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯಲ್ಲಿ ಪ್ರಕರಣ ದಾಖಲು ಇತ್ಯಾದಿಗಳು ಇಂತಹ ಕ್ರಮಗಳಲ್ಲಿ ಸೇರಿವೆ ಎಂದರು.
ಆದರೂ, ಮಾರ್ಚ್ 2021ರಲ್ಲಿ 6.17 ಲಕ್ಷ ಕೋಟಿ ರೂ.ಇದ್ದ ಸರಕಾರಿ ಬ್ಯಾಂಕುಗಳ ಒಟ್ಟು ಎನ್‌ಪಿಎ ಮಾರ್ಚ್ 2025ಕ್ಕೆ 2.84 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಐಬಿಸಿಯಡಿ ಕ್ರಮಗಳು ಇದಕ್ಕೆ ಪ್ರಮುಖ ಕಾರಣವಾಗಿವೆ ಎಂದು ಚೌಧರಿ ತಿಳಿಸಿದರು.
ಸಚಿವರ ಪ್ರಕಾರ ಎನ್‌ಪಿಎ ಪ್ರಮಾಣ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಇಳಿಕೆಯಾಗುತ್ತಿದೆ.
2015ರಲ್ಲಿ ಆರ್‌ಬಿಐನ ಆಸ್ತಿ ಗುಣಮಟ್ಟ ಪುನರ್‌ಪರಿಶೀಲನೆ ಮತ್ತು ನಂತರ ಸರಕಾರದ 4ಆರ್ ಕಾರ್ಯತಂತ್ರದೊಂದಿಗೆ ಬ್ಯಾಂಕ್ ಶುದ್ಧೀಕರಣ ಕಾರ್ಯಾಚರಣೆ ಆರಂಭಗೊಂಡ ಬಳಿಕ ಸರಕಾರಿ ಬ್ಯಾಂಕುಗಳಲ್ಲಿಯ ಒಟ್ಟು ಎನ್‌ಪಿಎ ಮಾ.31,2018ರಲ್ಲಿದ್ದ 8.96 ಲಕ್ಷ ಕೋಟಿ ರೂ.ಗಳ ಉತ್ತುಂಗ ಮಟ್ಟದಿಂದ ತೀವ್ರ ಇಳಿಕೆಯಾಗಿದೆ ಎಂದು ವಿತ್ತ ಸಚಿವಾಲಯದ ಅಧಿಕಾರಿಯೋರ್ವರು ತಿಳಿಸಿದರು.
ಸರ್ಫೇಸಿ ಕಾಯ್ದೆ ಹಾಗೂ ಸಾಲ ವಸೂಲಿ ಮತ್ತು ದಿವಾಳಿತನ ಕಾಯ್ದೆಗಳೂ ಕೆಟ್ಟ ಸಾಲಗಳ ತ್ವರಿತ ಮರುವಸೂಲಿಗೆ ನೆರವಾಗಿವೆ ಎಂದು ಹೇಳಿದ ಸಚಿವ ಚೌಧರಿ,ಸಾಲ ವಸೂಲಾತಿ ನ್ಯಾಯಮಂಡಳಿ(ಡಿಆರ್‌ಟಿ)ಯ ಹಣಕಾಸು ವ್ಯಾಪ್ತಿಯನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದ್ದು,ಇದರಿಂದಾಗಿ ಡಿಆರ್‌ಟಿಗಳು ಹೆಚ್ಚಿನ ಮೌಲ್ಯದ ಪ್ರಕರಣಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗಿದೆ,ಪರಿಣಾಮವಾಗಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಸಾಲ ಮರುವಸೂಲಾತಿಯಲ್ಲಿ ಹೆಚ್ಚಳವಾಗಿದೆ ಎಂದರು.