Kerala | ನಟಿಯ ಅತ್ಯಾಚಾರ ಪ್ರಕರಣ; ಪಲ್ಸರ್ ಸುನಿ ಸಹಿತ ಎಲ್ಲಾ ಆರೋಪಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಪಲ್ಸರ್ ಸುನಿ |Photo Credit : PTI
ಕೊಚ್ಚಿ, ಡಿ. 12: 2017ರ ನಟಿಯ ಅಪಹರಣ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಪ್ರಧಾನ ಆರೋಪಿ ಪಲ್ಸರ್ ಸುನಿ ಸೇರಿದಂತೆ 6 ಮಂದಿ ಆರೋಪಿಗಳಿಗೆ ಕೇರಳ ನ್ಯಾಯಾಲಯ ಶುಕ್ರವಾರ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಇದೇ ಪ್ರಕರಣದಲ್ಲಿ ಮಲೆಯಾಳಂ ಚಿತ್ರ ನಟ ದಿಲೀಪ್ ರನ್ನು ನ್ಯಾಯಾಲಯ ಖುಲಾಸೆಗೊಳಿಸಿದ ದಿನಗಳ ಬಳಿಕ ಈ ತೀರ್ಪು ಹೊರ ಬಿದ್ದಿದೆ.
ಎರ್ನಾಕುಳಂ ಜಿಲ್ಲಾ ಹಾಗೂ ಪ್ರಾಥಮಿಕ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಹನಿ ಎಂ. ವರ್ಗೀಸ್ ಅವರು ಸುನಿ ಎನ್.ಎಸ್. (ಪಲ್ಸರ್ ಸುನಿ), ಮಾರ್ಟಿನ್ ಆ್ಯಂಟೊನಿ, ಮಣಿಕಂಠನ್ ಬಿ., ವಿಜೇಶ್ ವಿ.ಪಿ., ಸಲೀಂ ಎಚ್. ಹಾಗೂ ಪ್ರದೀಪ್ ತಪ್ಪಿತಸ್ಥರು ಎಂದು ಸೋಮವಾರ ಘೋಷಿಸಿದ್ದರು.
ಎಲ್ಲಾ 6 ಆರೋಪಿಗಳಿಗೆ ನ್ಯಾಯಾಲಯ ತಲಾ 50 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ, 1 ವರ್ಷ ಹೆಚ್ಚುವರಿ ಕಾರಾಗೃಹ ಶಿಕ್ಷೆ ಅನುಭವಿಸಬೇಕು ಎಂದು ಹೇಳಿದೆ. ಅಲ್ಲದೆ, ಸಂತ್ರಸ್ತೆ ನಟಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಕೂಡ ಅದು ನಿರ್ದೇಶಿಸಿದೆ.
ಎಲ್ಲಾ ಆರೋಪಿಗಳಿಗೆ ಮುಖ್ಯವಾಗಿ ಸುನಿಗೆ ಜೀವಾವಾಧಿ ಶಿಕ್ಷೆ ನೀಡಬೇಕು ಎಂದು ಪ್ರಾಸಿಕ್ಯೂಷನ್ ಬಲವಾಗಿ ಪ್ರತಿಪಾದಿಸಿತು. ಆದರೆ, ಈ ಪ್ರಕರಣ ಗರಿಷ್ಠ ಶಿಕ್ಷೆಗೆ ಅರ್ಹವಲ್ಲ ಎಂದು ನ್ಯಾಯಾಧೀಶರು ಹೇಳಿದರು.
2017 ಫೆಬ್ರವರಿ 17ರಂದು ಆರು ಮಂದಿ ನಟಿಯನ್ನು ಅಪಹರಿಸಿ ಕಾರಿನ ಒಳಗೆ ಅವರಿಗೆ 2 ಗಂಟೆಗಳ ಕಾಲ ಲೈಂಗಿಕ ಕಿರುಕುಳ ನೀಡಿದ್ದರು, ಅಲ್ಲದೆ, ಅವರನ್ನು ಬ್ಲಾಕ್ ಮೇಲ್ ಮಾಡಲು ಕೃತ್ಯದ ವೀಡಿಯೊವನ್ನು ಮಾಡಿದ್ದರು ಎಂದು ಆರೋಪಿಸಲಾಗಿತ್ತು.
ಅನಂತರ ಆರೋಪಿಗಳು ಅವರನ್ನು ಚಿತ್ರ ನಿರ್ದೇಶಕರೊಬ್ಬರ ನಿವಾಸದ ಸಮೀಪ ಬಿಟ್ಟು ಹೋಗಿದ್ದರು ಎಂದು ಹೇಳಲಾಗಿತ್ತು. ಆ ನಿರ್ದೇಶಕರು ಮಹಿಳೆಗೆ ಪೊಲೀಸರನ್ನು ಸಂಪರ್ಕಿಸಲು ಹಾಗೂ ಪ್ರಕರಣ ದಾಖಲಿಸಲು ನೆರವಾಗಿದ್ದರು.
ಪ್ರಕರಣದಲ್ಲಿ ನಟ ದಿಲೀಪ್ ಸೇರಿದಂತೆ 10 ಮಂದಿ ಆರೋಪಿಗಳು ಎಂದು ಪರಿಗಣಿಸಲಾಗಿತ್ತು. ದಿಲೀಪ್ ಈ ಘಟನೆಯ ರೂವಾರಿ ಎಂದು ಹೇಳಲಾಗಿತ್ತು.