×
Ad

Goa ನೈಟ್ ಕ್ಲಬ್ ನಲ್ಲಿ ಅಗ್ನಿ ದುರಂತ | ಉಪ್ಪು ತಯಾರಿಕಾ ಪ್ರದೇಶವನ್ನು ವಸತಿ ಪ್ರದೇಶವಾಗಿ ಪರಿವರ್ತಿಸಿದ್ದ ಅಧಿಕಾರಿಗಳು!

ಜಮೀನಿನ ‘ಮೂಲ ಮಾಲಕ’ನ ಆರೋಪ

Update: 2025-12-12 21:49 IST

Photo Credit : PTI 

ಪಣಜಿ,ಡಿ.2: ಕಳೆದ ವಾರ ಗೋವಾದಲ್ಲಿ ಭೀಕರ ಅಗ್ನಿದುರಂತಕ್ಕೆ ಸಾಕ್ಷಿಯಾದ ‘ಬರ್ಚ್ ಬೈ ರೋಮಿಯೊ’ ನೈಟ್‌ ಕ್ಲಬ್‌ ನ ಜಮೀನು ಮೂಲತಃ ತನ್ನ ಆಸ್ತಿಯಾಗಿತ್ತು. ಕ್ಲಬ್ ನಿರ್ಮಿಸುವುದಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಅಧಿಕಾರಿಗಳು ಉಪ್ಪು ತಯಾರಿಕಾ ಘಟಕವಾಗಿದ್ದ ಆ ಪ್ರದೇಶದ ಸ್ಥಾನಮಾನವನ್ನು ವಸತಿ ಪ್ರದೇಶವೆಂಬುದಾಗಿ ಪರಿವರ್ತಿಸಿದ್ದರೆಂದು ಆ ಜಾಗದ ಮೂಲ ಮಾಲಿಕನೆಂದು ಹೇಳಿಕೊಂಡಿರುವ ಪ್ರದೀಪ್ ಘಾಡಿ ಅಮೊನ್ಕರ್ ಎಂಬವರು ಆಪಾದಿಸಿದ್ದಾರೆ.

2004ರಲ್ಲಿ ಸುರೀಂದರ್ ಖೋಸ್ಲಾ ಎಂಬವರೊಂದಿಗೆ ತಾನು ಜಮೀನಿನ ಮಾರಾಟ ಒಪ್ಪಂದವೊಂದಕ್ಕೆ ಸಹಿಹಾಕಿದ್ದೆ. ಆದರೆ ತನಗೆ ಹಣಪಾವತಿಯಾಗದ ಕಾರಣ ಆರು ತಿಂಗಳೊಳಗೆ ತಾನು ಒಪ್ಪಂದದಿಂದ ಹಿಂದೆ ಸರಿದಿದ್ದೆ ಅವರು ಹೇಳಿದ್ದಾರೆ. ಖೋಸ್ಲಾ ಅವರು ತನ್ನ ಅರಿವಿಗೆ ಬಾರದೆಯೇ ಆ ಜಮೀನಿನಲ್ಲಿ ನೈಟ್ ಕ್ಲಬ್ ಸ್ಥಾಪಿಸಿದ್ದರು. ತದನಂತರ ಅದನ್ನು ಸೌರಬ್ ಹಾಗೂ ಗೌರವ್ ಲೂತ್ರಾ ಅವರು ಖರೀದಿಸಿದ್ದರು ಎಂದು ಅಮೊನ್ಕರ್ ತಿಳಿಸಿದ್ದಾರೆ.

ಜಮೀನಿನ ಒಡೆತನಕ್ಕೆ ಸಂಬಂಧಿಸಿ ತಾನು ನ್ಯಾಯಾಲಯದಲ್ಲಿ ಹಲವಾರು ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.

‘‘ ಅರ್ಪೊರಾ ಪ್ರದೇಶದಲ್ಲಿ ಅಕ್ರಮವಾಗಿ ಸ್ವಾಧೀನಪಡಿಸಿಕೊಳ್ಳಲಾದ ಈ ಜಮೀನನ್ನು ವಾಪಸ್ ಪಡೆಯಲು ತಾನು ನ್ಯಾಯಾಲಯದಲ್ಲಿ ಕಳೆದ 21 ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಾ ಬಂದಿದ್ದೇನೆ. ನನಗೆ ಮಾಹಿತಿ ನೀಡದೆಯೇ ಸರಕಾರವು ತನ್ನ ಜಮೀನಿನ ವಲಯ ವ್ಯವಸ್ಥೆ (ರೆನಿಂಗ್) ಅನ್ನು ಬದಲಾಯಿಸಿತ್ತು. ಉಪ್ಪಿನ ಗದ್ದೆಯಾಗಿದ್ದ ಈ ಪ್ರದೇಶವನ್ನು ವಸತಿ ಪ್ರದೇಶವಾಗಿ ಪರಿವರ್ತಿಸಿದ್ದು ಹೇಗೆ ’’ಎಂದವರು ಪ್ರಶ್ನಿಸಿದ್ದಾರೆ.

ಗೋವಾ ಪಟ್ಟಣ ಹಾಗೂ ಗ್ರಾಮ ನಿವೇಶನ ಯೋಜನೆಯ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಈ ವಿಷಯದ ಕುರಿತಾಗಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಅಮೊನ್‌ಕರ್ ಅವರ ಆರೋಪಗಳ ಬಗ್ಗೆ ತಾವು ಪ್ರತಿಕ್ರಿಯಿಸುವುದು ಸೂಕ್ತವಲ್ಲವೆಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News