ಡಾಲರ್ ನೆದುರು 90.5ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ!
ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ,ಡಿ.12: ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದ ಕುರಿತು ಅನಿಶ್ಚಿತತೆಯ ನಡುವೆ ಶುಕ್ರವಾರ ಭಾರತೀಯ ರೂಪಾಯಿ ಅಮೆರಿಕದ ಡಾಲರ್‌ನೆದುರು 90.5ರ ಹೊಸ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ರೂಪಾಯಿ ಗುರುವಾರ ಡಾಲರೆನೆದುರು 90.46 ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿತ್ತು.
ಶೇರು ಮಾರುಕಟ್ಟೆಯಿಂದ ವಿದೇಶಿ ಬಂಡವಾಳದ ನಿರಂತರ ಹೊರಹರಿವು ಕೂಡ ರೂಪಾಯಿ ಅಪಮೌಲ್ಯಕ್ಕೆ ಕಾರಣವಾಗಿದೆ. 2025ರಲ್ಲಿ ರೂಪಾಯಿ ಡಾಲರ್ ನೆದುರು ಸುಮಾರು ಶೇ.6ರಷ್ಟು ಕುಸಿದಿದ್ದು, ಪ್ರಸಕ್ತ ವರ್ಷದಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿರುವ ಏಷ್ಯನ್ ಕರೆನ್ಸಿಯಾಗಿದೆ.
ರಾಯ್ಟರ್ಸ್ ಸುದ್ದಿಸಂಸ್ಥೆಯ ಪ್ರಕಾರ ಈ ವರ್ಷ ವಿದೇಶಿ ಹೂಡಿಕೆದಾರರು ಭಾರತೀಯ ಶೇರು ಮಾರುಕಟೆಯಿಂದ 18 ಶತಕೋಟಿ ಡಾಲರ್ ಗಳನ್ನು ಹಿಂದೆಗೆದುಕೊಂಡಿದ್ದಾರೆ. ಸರಕು ವ್ಯಾಪಾರ ಕೊರತೆ ಅಥವಾ ರಫ್ತಿಗಿಂತ ಆಮದುಗಳು ಹೆಚ್ಚಾದಾಗ ಉಂಟಾಗುವ ವ್ಯತ್ಯಾಸವೂ ಅಕ್ಟೋಬರ್ ನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು.
ಅಮೆರಿಕದ ಜೊತೆ ಭಾರತದ ವ್ಯಾಪಾರ ಒಪ್ಪಂದ ಇನ್ನೂ ಏರ್ಪಡದ್ದರಿಂದ ಭಾರತೀಯ ಸರಕುಗಳು ಆ ದೇಶದಲ್ಲಿ ಶೇ.50ರಷ್ಟು ಒಟ್ಟು ಸುಂಕದರವನ್ನು ಎದುರಿಸುತ್ತಿವೆ.
ರೂಪಾಯಿ ಮೌಲ್ಯ ಕುಸಿತಕ್ಕಾಗಿ ಪ್ರತಿಪಕ್ಷಗಳು ಕೇಂದ್ರ ಸರಕಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ.