ಬಹುಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಂಜಾಬ್‌ನ ವಿವಿಧ ಭಾಗಗಳಲ್ಲಿ ರೈತರಿಂದ ಟ್ರ್ಯಾಕ್ಟರ್ ರ‍್ಯಾಲಿ
PC : PTI
ಚಂಡಿಗಢ : ತಮ್ಮ ಬಹು ಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಬ್ಯಾನರ್ ಅಡಿಯಲ್ಲಿ ವಿವಿಧ ಸಂಘಟನೆಗಳ ರೈತರು ಪಂಜಾಬ್ ನಾದ್ಯಂತ ಹಲವು ಸ್ಥಳಗಳಲ್ಲಿ ರವಿವಾರ ಟ್ರ್ಯಾಕ್ಟರ್ ರ‍್ಯಾಲಿ ನಡೆಸಿದರು.
ರೈತರ ಬೇಡಿಕೆಗಳಲ್ಲಿ ಸ್ವಾಮಿನಾಥನ್ ಸಮಿತಿಯ ಸಿ2 ಪ್ಲಸ್ ಶೇ. 50 ಸೂತ್ರವನ್ನು ಆಧರಿಸಿದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನು ಖಾತರಿ, ರೈತರ ಹಾಗೂ ಕೃಷಿ ಕಾರ್ಮಿಕರಿಗೆ ಸಮಗ್ರ ಸಾಲ ಮನ್ನಾ ಯೋಜನೆ, ವಿದ್ಯುತ್ ಖಾಸಗೀಕರಣ ಮಾಡದೇ ಇರುವುದು, ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ರಚನೆ (ಎನ್‌ಪಿಎಫ್‌ಎಎಂ) ರದ್ದು, ಸಾಲ ಮನ್ನಾ ಒಳಗೊಂಡಿವೆ.
ರೈತರ ಬೇಡಿಕೆಗಳ ಕುರಿತು ಗಮನ ಸೆಳೆಯಲು ನಡೆದ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಎಸ್‌ಕೆಎಂನ ಹಿರಿಯ ನಾಯಕರು ಸೇರಿದಂತೆ ನೂರಾರು ರೈತರು ಪಾಲ್ಗೊಂಡರು. ಕೆಲವು ಕಡೆಗಲ್ಲಿ ರೈತರ ಟ್ರ್ಯಾಕ್ಟರ್‌ಗಳಲ್ಲಿ ಕಪ್ಪು ಧ್ವಜ ಪ್ರದರ್ಶಿಸಲಾಗಿತ್ತು.
ಬಾಕಿ ಇರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ 2020-21ರಲ್ಲಿ ದಿಲ್ಲಿ ಗಡಿಯಲ್ಲಿ ನಡೆದ ಚಾರಿತ್ರಿಕ ಹೋರಾಟಕ್ಕಿಂತ ತೀವ್ರವಾದ ಹಾಗೂ ದೃಢ ಸಂಕಲ್ಪದ ದೇಶವ್ಯಾಪಿ ಹೋರಾಟವನ್ನು ಯೋಜಿಸಲಾಗಿದೆ ಎಂದು ಎಸ್‌ಕೆಎಂ ಇತ್ತೀಚೆಗಿನ ಹೇಳಿಕೆಯಲ್ಲಿ ತಿಳಿಸಿತ್ತು.
ಇನ್ನೊಂದೆಡೆ ಕಳೆದ 11 ತಿಂಗಳಿಂದ ಖನೌರಿ ಹಾಗೂ ಶಂಬು ಗಡಿ ಕೇಂದ್ರಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಹಾಗೂ ಎಸ್‌ಕೆಎಂ (ರಾಜಕೀಯೇತರ ಸಂಘಟನೆ) ಕೂಡ ರಾಜ್ಯದ ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿವೆ. ಈ ಸಂಘಟನೆಗಳಿಗೆ ನಿಷ್ಠರಾಗಿರುವ ರೈತರು ಜನವರಿ 26ರಂದು ಕರೆ ನೀಡಿದ್ದ ಟ್ರ್ಯಾಕ್ಟರ್ ರ‍್ಯಾಲಿಯ ಭಾಗವಾಗಿ ಕಾರ್ಪೊರೇಟ್ ಮಾಲಕತ್ವದ ದೊಡ್ಡ ಶಾಪಿಂಗ್ ಮಾಲ್ ಹಾಗೂ ದಾಸ್ತಾನು ಕೇಂದ್ರದ ಹೊರಗೆ ತಮ್ಮ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದೆರು.
ಕಾರ್ಪೋರೇಟ್ ಸಂಸ್ಥೆಗಳಿಂದ ಅಂಚಿಗೆ ತಳ್ಳಪಟ್ಟವರೆಂದು ಹೇಳಲಾದ ಸಣ್ಣ ವ್ಯಾಪಾರಿಗಳು ಹಾಗೂ ಉದ್ಯಮಿಗಳಿಗೆ ಬೆಂಬಲ ವ್ಯಕ್ತಪಡಿಸುವ ಉದ್ದೇಶದೊಂದಿಗೆ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೆಎಂಎಂ ನಾಯಕರು ಹೇಳಿದ್ದಾರೆ. ಅವರು ರೈತ ನಾಯಕ ಜಗಜೀತ್ ಸಿಂಗ್ ಡಲ್ಲೇವಾಲ್ ಅವರಿಗೆ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ಚಂಡಿಗಢದಲ್ಲಿ ಫೆಬ್ರವರಿ 14ರಂದು ಆಯೋಜಿಸಲಾದ ಸಭೆಯಲ್ಲಿ ತಮ್ಮ ಬೇಡಿಕೆಗಳ ಕುರಿತ ಚರ್ಚಿಸಲು ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಿಯಾ ರಾಜನ್ ನೇತತ್ವದ ಕೇಂದ್ರ ಸರಕಾರದ ಉನ್ನತ ಮಟ್ಟದ ನಿಯೋಗ ಎಸ್‌ಕೆಎಂ (ರಾಜಕೀಯೇತರ ಸಂಘಟನೆ) ಹಾಗೂ ಕೆಎಂಎಂ ಅನ್ನು ಇತ್ತೀಚೆಗೆ ಮಾತುಕತೆಗೆ ಆಹ್ವಾನಿಸಿರುವುದು ಗಮನಾರ್ಹ
ಅನಂತರ ಎಸ್‌ಕೆಎಂ (ರಾಜಕೀಯೇತರ)ನ ಹಿರಿಯ ನಾಯಕ ಜಗಜೀತ್ ಸಿಂಗ್ ಡಲ್ಲೇವಾಲ್ ಅವರು ವೈದ್ಯಕೀಯ ನೆರವು ಸ್ವೀಕರಿಸಿದ್ದರು. ಆದರೆ, ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನವೆಂಬರ್ 26ರಂದು ಆರಂಭಿಸಿದ ತನ್ನ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರವನ್ನು ಅಂತ್ಯಗೊಳಿಸಿಲ್ಲ.