ಪಂಜಾಬ್ | ಅಪರಿಚಿತ ವಿಮಾನ ಪತನ; ಓರ್ವ ನಾಗರಿಕ ಮೃತ್ಯು, 9 ಮಂದಿಗೆ ಗಾಯ
PC : hindustantimes.com
ಚಂಡಿಗಢ: ಪಂಜಾಬ್‌ನ ಬಠಿಂಡಾ ಜಿಲ್ಲೆಯ ಅಕಲಿಯನ್ ಕಲಾನ್ ಗ್ರಾಮದಲ್ಲಿ ಅಪರಿಚಿತ ವಿಮಾನವೊಂದಕ್ಕೆ ಬೆಂಕಿ ಹತ್ತಿಕೊಂಡು ಪತನಗೊಂಡ ಪರಿಣಾಮ ಓರ್ವ ನಾಗರಿಕ ಮೃತಪಟ್ಟಿದ್ದಾರೆ ಹಾಗೂ 9 ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟ ನಾಗರಿಕನನ್ನು ಹರ್ಯಾಣದ ಛಖ್ರಿ ದಾದ್ರಿಯ ಕೃಷಿ ಕಾರ್ಮಿಕ ಗೋವಿಂದ ಎಂದು ಗುರುತಿಸಲಾಗಿದೆ.
ಈ ವಿಮಾನ ಸಮೀಪದ ವಸತಿ ಪ್ರದೇಶದಿಂದ ಸರಿಸುಮಾರು 500 ಮೀಟರ್ ದೂರದಲ್ಲಿರುವ ಕೊಯ್ಲು ಮಾಡಿದ ಗೋಧಿ ಹೊಲದಲ್ಲಿ ಮುಂಜಾನೆ ಸುಮಾರು 2 ಗಂಟೆಗೆ ಪತನಗೊಂಡಿತು. ವಿಮಾನದ ಪೈಲಟ್ ಬಗ್ಗೆ ಇದುವರೆಗೆ ಮಾಹಿತಿ ದೊರಕಿಲ್ಲ.
ಪತ್ಯಕ್ಷದರ್ಶಿಗಳ ಪ್ರಕಾರ ಸ್ಥಳೀಯ ಧಾನ್ಯ ಮಾರುಕಟ್ಟೆಯಲ್ಲಿ ಹಲವು ಕೃಷಿ ಕಾರ್ಮಿಕರು ಮಂಗಳವಾರ ರಾತ್ರಿ ವಿಮಾನವೊಂದು ಅಸ್ವಾಭಾವಿಕವಾಗಿ ಹಾರಾಡುತ್ತಿರುವುದನ್ನು ಗಮನಿಸಿದ್ದಾರೆ. ಮುಂಜಾನೆ ವಿಮಾನ ಪತನಗೊಂಡ ದೊಡ್ಡ ಸದ್ದಿನಿಂದ ಅವರು ಎಚ್ಚೆತ್ತುಕೊಂಡು ಸ್ಥಳಕ್ಕೆ ಧಾವಿಸಿದ್ದಾರೆ.
ಅವರು ವಿಮಾನದ ಸಮೀಪ ಸಾಗುತ್ತಿದ್ದಂತೆ ಅದು ಸ್ಪೋಟಗೊಂಡಿತು. ಇದರಿಂದ ಗೋವಿಂದ ಹಾಗೂ ಇತರ 9 ಮಂದಿ ಗಾಯಗೊಂಡರು ಎಂದು ಅವರು ತಿಳಿಸಿದ್ದಾರೆ.
ಗಂಭೀರ ಗಾಯಗೊಂಡ ಗೋವಿಂದ ಅವರನ್ನು ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಗಾಯಗೊಂಡವರಲ್ಲಿ 8 ಮಂದಿ ಶಹೀದ್ ಭಾ ಮಣಿ ಸಿಂಗ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರನ್ನು ಬಠಿಂಡಾದ ಏಮ್ಸ್‌ಗೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ಸಂಭವಿಸಿದ ಕೂಡಲೇ ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸರ ತಂಡ ಧಾವಿಸಿ ಸ್ಥಳವವನ್ನು ಸುತ್ತುವರಿದರು. ಅಗ್ನಿ ಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿತು. ವಿಮಾನದ ಗುರುತಿನ ಬಗ್ಗೆ ಜಿಲ್ಲಾಡಳಿತ ಮೌನವಾಗಿದ್ದು, ಘಟನೆಯ ಕುರಿತು ಯಾವುದೇ ಪ್ರತಿಕ್ರಿಯೆಗಳನ್ನು ರಕ್ಷಣಾ ಇಲಾಖೆಯ ಅಧಿಕಾರಿ ಮಾತ್ರ ನೀಡುತ್ತಾರೆ ಎಂದು ಹೇಳಿದೆ.