×
Ad

ಪಂಜಾಬ್‌ | ಪಾಕಿಸ್ತಾನದ ಐಎಸ್‌ಐ ಜೊತೆ ನಂಟು : ಅಮೃತಸರದ ಮೇಹಕ್‌ದೀಪ್ ಸಿಂಗ್, ಆದಿತ್ಯ ಬಂಧನ

Update: 2025-10-21 21:24 IST

Photo Credit : NDTV 

ಚಂಡಿಗಢ, ಅ. 21: ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದಲ್ಲಿ ಪಂಜಾಬ್ ಪೊಲೀಸರು ಗುಪ್ತಚರ ಮಾಹಿತಿ ಆಧರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಸಂಘಟನೆಯ ಇಬ್ಬರು ಸದಸ್ಯರನ್ನು ಬಂಧಿಸಿದ್ದಾರೆ. ಅವರಲ್ಲಿದ್ದ ರಾಕೆಟ್ ಪ್ರೊಪೆಲ್ಲಡ್ ಗ್ರೆನೇಡ್ (ಆರ್‌ಪಿಜಿ-22 ನೆಟ್ಟೋ ಟ್ಯಾಂಕ್ ನಿಗ್ರಹ ರಾಕೆಟ್ ಉಡಾವಕ) ಹಾಗೂ ಅದರ ಉಡಾವಕವನ್ನು ವಶಪಡಿಸಿಕೊಂಡಿದ್ದಾರೆ.

ಭಯೋತ್ಪಾದಕ ಸಂಘಟನೆಯ ಬಂಧಿತ ಸದಸ್ಯರನ್ನು ಅಮೃತಸರದ ವಾಡಾಲಿ ನಿವಾಸಿ ಮೇಹಕ್‌ದೀಪ್ ಸಿಂಗ್ ಆಲಿಯಾಸ್ ಮೇಹಕ್ ಹಾಗೂ ಅಮೃತಸರದ ಭಾಗಾ ಛಿನಾ ಗ್ರಾಮದ ನಿವಾಸಿ ಆದಿತ್ಯ ಆಲಿಯಾಸ್ ಆದಿ ಎಂದು ಗುರುತಿಸಲಾಗಿದೆ. ಪೊಲೀಸರ ತಂಡ ಅವರಿಂದ ಆರ್‌ಪಿಜಿ ಅಲ್ಲದೆ, ಮೋಟಾರು ಸೈಕಲ್ ಅನ್ನು ವಶಪಡಿಸಿಕೊಂಡಿದೆ ಎಂದು ಪಂಜಾಬ್‌ನ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.

ಆರೋಪಿಗಳು ಗಡಿಯಾಚೆಯಿಂದ ಡ್ರೋನ್ ಮೂಲಕ ಸಾಮಗ್ರಿಗಳನ್ನು ರವಾನಿಸುವ ಪಾಕಿಸ್ತಾನದ ಐಎಸ್‌ಐ ಏಜೆಂಟ್‌ರೊಂದಿಗೆ ಹಾಗೂ ಪ್ರಸ್ತುತ ಫಿರೋಝ್‌ಪುರ ಕಾರಾಗೃಹದಲ್ಲಿರುವ ಹರ್ಪ್ರೀತ್ ಸಿಂಗ್ ಆಲಿಯಾಸ್ ವಿಕ್ಕಿಯೊಂದಿಗೆ ಸಂಪರ್ಕ ಇರಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ ಎಂದು ಯಾದವ್ ಹೇಳಿದ್ದಾರೆ.

‘‘ಭಯೋತ್ಪಾದಕರು ನಿರ್ದಿಷ್ಟ ಗುರಿಯನ್ನು ಹೊಡೆಯಲು ಆರ್‌ಪಿಜಿಯನ್ನು ಬಳಸಲು ಉದ್ದೇಶಿಸಿದ್ದರು. ಸಂಪೂರ್ಣ ಜಾಲವನ್ನು ಧ್ವಂಸಗೊಳಿಸಲು ಹಿಂದಿನ ಹಾಗೂ ಮುಂದಿನ ಸಂಪರ್ಕಗಳನ್ನು ಕಂಡು ಹಿಡಿಯಲು ತನಿಖೆ ನಡೆಯುತ್ತಿದೆ’’ ಎಂದು ಅವರು ಹೇಳಿದ್ದಾರೆ.

ಕಾರ್ಯಾಚರಣೆಯ ವಿವಿರಗಳನ್ನು ಹಂಚಿಕೊಂಡ ಅಮೃತಸರ (ಗ್ರಾಮೀಣ)ದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಣಿಂದರ್ ಸಿಂಗ್,

ಆರ್‌ಜಿಪಿ-22 ನೆಟ್ಟೋ ಟ್ಯಾಂಕ್ ನಿಗ್ರಹ ಉಡಾವಕ ಶಂಕಿತ ಮೇಹಕ್‌ದೀಪ್ ಹಾಗೂ ಆದಿತ್ಯ ಅವರ ಬಳಿ ಇದೆ ಎಂಬ ಗುಪ್ತಚರ ಮಾಹಿತಿಯ ಆಧಾರದಲ್ಲಿ ಹಾಗೂ ಹರ್ಪ್ರೀತ್ ಆಲಿಯಾಸ್ ವಿಕ್ಕಿಯ ಸೂಚನೆಯಂತ ಪೊಲೀಸ್ ತಂಡ ಈ ಇಬ್ಬರನ್ನು ಬಂಧಿಸಿತು ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News