ಚಂಡಿಗಢ ಚಲೋ’ಗೆ ಎಸ್‌ಕೆಎಂ ಕರೆ; ಹಲವು ರೈತ ನಾಯಕರು ಪೊಲೀಸ್ ವಶಕ್ಕೆ
PC - indianexpress
ಚಂಡಿಗಢ: ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ ‘ಚಂಡಿಗಢ ಚಲೋ’ಗೆ ಮುನ್ನ ಪಂಜಾಬ್ ಪೊಲೀಸರು ಹಲವು ರೈತ ಒಕ್ಕೂಟಗಳ ನಾಯಕರನ್ನು ಮಂಗಳವಾರ ವಶಕ್ಕೆ ತೆಗೆದುಕೊಂಡಿದ್ದಾರೆ.ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ‘ಚಂಡಿಗಢ ಚಲೋ’ಗೆ ಕರೆ ನೀಡಿದ ಮುಂಚಿತವಾಗಿ ರೈತರು ಮಾರ್ಚ್ 5ರಂದು ನಗರದತ್ತ ರ‍್ಯಾಲಿ ನಡೆಸಲಿದ್ದಾರೆ.
ರೈತ ನಾಯಕರು ಹಾಗೂ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ನಡುವೆ ಮಾರ್ಚ್ 3ರಂದು ನಡೆದ ಮಾತುಕತೆಗಳು ವಿಫಲವಾದ ಹಿನ್ನೆಲೆಯಲ್ಲಿ ರೈತರು ಈ ರ‍್ಯಾಲಿ ನಡೆಸುತ್ತಿದ್ದಾರೆ. ಪಂಜಾಬ್ ಪೊಲೀಸರ ರಾಜ್ಯಾದ್ಯಂತ ಮಧ್ಯರಾತ್ರಿ ಹಲವು ರೈತ ಒಕ್ಕೂಟಗಳ ನಾಯಕರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಹಾಗೂ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸ್ ಸಿಬ್ಬಂದಿ ಮುಂಜಾನೆ ಆಗಮಿಸಿದಾಗ ಮನೆಯಲ್ಲಿ ಹೆಚ್ಚಿನ ನಾಯಕರು ಇರಲಿಲ್ಲ. ಆದುದರಿಂದ ಪೊಲೀಸರು ಕೆಲವರನ್ನು ಮಾತ್ರ ವಶಕ್ಕೆ ತೆಗೆದುಕೊಂಡರು ಎಂದು ರೈತ ನಾಯಕರೋರ್ವರು ತಿಳಿಸಿದ್ದಾರೆ.
ಪೊಲೀಸರು ಮೊಹಾಲಿ, ಲುಧಿಯಾನ, ಚಂಡಿಗಢ, ರೋಪರ್, ಆನಂದಪುರ ಸಾಹಿಬ್, ಪಾಟಿಯಾಲ ಹಾಗೂ ಬರ್ನಾಲದಲ್ಲಿ ದಾಳಿ ನಡೆಸಿ ಹಲವು ರೈತ ನಾಯಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಬಿಕೆಯು ಏಕ್ತಾ ಉಗ್ರಹಾನ್‌ನ ಅಧ್ಯಕ್ಷ ಜೋಗಿಂದರ್ ಸಿಂಗ್ ಉಗ್ರಹಾನ್‌ನ ಅವರ ನಿವಾಸದ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಆದರೆ, ಅಲ್ಲಿ ಅವರನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಈ ದಾಳಿ ನಡೆಸಿದ್ದಾರೆ ಹಾಗೂ ನಮ್ಮ ಬೆಂಬಲಿಗರನ್ನು ಸುತ್ತುವರಿಯುತ್ತಿದ್ದಾರೆ ಎಂದು ಉಗ್ರಹಾನ್ ತಿಳಿಸಿದ್ದಾರೆ.
ಪಂಜಾಬ್ ಸರಕಾರ ಏನು ಬೇಕಾದರೂ ಮಾಡಲಿ. ಆದರೆ, ಪೊಲೀಸ್ ದಬ್ಬಾಳಿಕೆಯ ಹೊರತಾಗಿಯೂ ಪ್ರತಿಭಟನಕಾರರು ರ‍್ಯಾಲಿ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪೊಲೀಸ್ ಪಡೆ ಸಜ್ಜುಗೊಂಡಿದೆ ಹಾಗೂ ರೈತರನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮುಂದುವರಿದಿದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ, ರೈತ ನಾಯಕರನ್ನು ವಶಕ್ಕೆ ತೆಗೆದುಕೊಂಡಿರುವುದಕ್ಕಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರನ್ನು ಪ್ರತಿಪಕ್ಷಗಳ ನಾಯಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಇದು ಆಪ್ ಸರಕಾರದ ರೈತ ವಿರೋಧಿ ಮನಸ್ಥಿತಿಯನ್ನು ಪ್ರತಿಬಿಂಬಿಸಿದೆ ಎಂದು ಆರೋಪಿಸಿದ್ದಾರೆ.