ಕೇಂದ್ರದ ಕರಡು ಕೃಷಿ ನೀತಿಯನ್ನು ಒಮ್ಮತದಿಂದ ತಿರಸ್ಕರಿಸಿದ ಪಂಜಾಬ್
PC: x.com/thetribunechd
ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ಚೌಕಟ್ಟಿನ ಕರಡನ್ನು ವಿರೋಧಿಸುವ ನಿರ್ಣಯವನ್ನು ಪಂಜಾಬ್ ವಿಧಾನಸಭೆ ಮಂಗಳವಾರ ಅವಿರೋಧವಾಗಿ ಆಂಗೀಕರಿಸಿದೆ. ಕೇಂದ್ರ ಸರ್ಕಾರ 2021ರಲ್ಲಿ ರದ್ದುಪಡಿಸಿದ್ದ ಕೃಷಿ ಕಾನೂನುಗಳನ್ನು ವಾಪಾಸು ತರುವ ಪ್ರಯತ್ನ ಇದಾಗಿದೆ ಎಂದು ಕೇಂದ್ರದ ಕ್ರಮವನ್ನು ವಿರೋಧಿಸಲಾಗಿದೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರೈತರ ಬಗ್ಗೆ ವೈರತ್ವ ಹೊಂದಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ದೂರಿದ್ದಾರೆ. ಬಿಜೆಪಿಯ ಇಬ್ಬರು ಶಾಸಕರು ನಿರ್ಣಯದ ಮೇಲಿನ ಮತದಾನದಿಂದ ಹೊರಗುಳಿದಿದ್ದು, ಉಳಿದ ಎಲ್ಲ ಶಾಸಕರು ವಿಶೇಷ ಅಧಿವೇಶನದ ಕೊನೆಯ ದಿನ ಮಂಡಿಸಿದ್ದ ನಿರ್ಣಯವನ್ನು ಅವಿರೋಧವಾಗಿ ಬೆಂಬಲಿಸಿದರು.
ನಿರ್ಣಯದ ಮೇಲಿನ ಚರ್ಚೆಯನ್ನು ಸಮಾಪನಗೊಳಿಸಿದ ಮುಖ್ಯಮಂತ್ರಿ, "ಪಂಜಾಬ್ ನ ಬಗ್ಗೆ ಕೇಂದ್ರ ದ್ವೇಷ ಹೊಂದಿದೆ. ಬಹುಶಃ ಪಕ್ಷ ರಾಜ್ಯದಲ್ಲಿ ಗೆಲುವು ಸಾಧಿಸದೇ ಒಳಗೊಳಗೇ ಕುದಿಯುತ್ತಿದೆ ಅಥವಾ ಆ ಪಕ್ಷಕ್ಕೆ ಇಲ್ಲಿ ಯಾವುದೇ ಚುನಾವಣಾ ಅವಕಾಶಗಳಿಲ್ಲ. ನಮಗೆ ತೊಂದರೆ ನೀಡಲು ಮಾತ್ರ ಅವರು ಬಯಸಿದ್ದಾರೆ. ರೈತರ ಪ್ರತಿಭಟನೆಗೆ ಮಣಿದು ಪ್ರಧಾನಮಂತ್ರಿ ಮೂರು ಕೃಷಿ ಕಾನೂನುಗಳನ್ನು ವಾಪಾಸು ಪಡೆದಿದ್ದಾರೆ. ಇದು 11 ವರ್ಷದ ಅಧಿಕಾರಾವಧಿಯಲ್ಲಿ ಅವರು ವಾಪಾಸು ಪಡೆದ ಏಕೈಕ ನಿರ್ಧಾರ" ಎಂದು ಹೇಳಿದರು.
ರಾಜ್ಯ ಸರ್ಕಾರ ಕರಡು ನೀತಿಯನ್ನು ತಿರಸ್ಕರಿಸಿರುವುದು ಮಾತ್ರವಲ್ಲದೇ, ಇದರ ನೀಚ ವಿನ್ಯಾಸದಲ್ಲಿ ಯಶಸ್ವಿಯಾಗದಂತೆ ಎಚ್ಚರ ವಹಿಸುತ್ತದೆ. ರಾಜ್ಯ ಸರ್ಕಾರ ರಾಜ್ಯದ ಹಿತಾಸಕ್ತಿಯನ್ನು ಸಂರಕ್ಷಿಸಲು ಅತ್ಯುತ್ತಮ ಕಾನೂನು ತಜ್ಞರನ್ನು ನಿಯೋಜಿಸಿದೆ ಎಂದು ಸ್ಪಷ್ಟಪಡಿಸಿದರು.
ಈ ಕರಡು ನೀತಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಬಗ್ಗೆ ಮೌನ ತಾಳಿದೆ. ಇದು ಕನಿಷ್ಠ ಬೆಂಬಲ ಬೆಲೆಯಲ್ಲಿ ಗೋಧಿ ಹಾಗೂ ಭತ್ತವನ್ನು ಖರೀದಿಸುವ ಕ್ರಮವನ್ನು ಸ್ಥಗಿತಗೊಳಿಸಲಿದೆ ಎಂಬ ವಿಚಾರದಲ್ಲಿ ಕೇಂದ್ರದ ಬಗ್ಗೆ ರೈತರಲ್ಲಿ ಅನುಮಾನ ಮೂಡಿಸಿದೆ ಎಂದು ಆಪಾದಿಸಿದರು. ಆಹಾರ ಉತ್ಪನ್ನಗಳ ಬೆಳೆಗಾರರಿಗೆ ಪೂರಕವಾಗಿ ರಾಜ್ಯ ಸರ್ಕಾರ ಕೈಗೊಂಡ ಉಪಕ್ರಮಗಳ ಬಗ್ಗೆ ಮೋದಿ ಬಡಾಯಿ ಕೊಚ್ಚುತ್ತಿದ್ದರೂ, ಅವರ ಸರ್ಕಾರ ರೈತರ ಬಗ್ಗೆ ಅದರಲ್ಲೂ ಪಂಜಾಬ್ ನ ಬಗ್ಗೆ ದ್ವೇಷಭಾವನೆ ಹೊಂದಿದೆ" ಎಂದು ದೂರಿದರು.