ಖತರ್ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ | ಮಾಜಿ ನೌಕಾಪಡೆ ಅಧಿಕಾರಿ ಪೂರ್ಣೇಂದು ತಿವಾರಿ ಬಿಡುಗಡೆ ವಿಳಂಬ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಕಳೆದ ವರ್ಷ ತಮ್ಮ ಏಳು ಮಂದಿ ಸಹಚರರೊಂದಿಗೆ ಮರಣ ದಂಡನೆ ಶಿಕ್ಷೆಯಿಂದ ಮುಕ್ತಗೊಂಡಿದ್ದ ಮಾಜಿ ಭಾರತೀಯ ನೌಕಾಪಡೆ ಅಧಿಕಾರಿ ಪೂರ್ಣೇಂದು ತಿವಾರಿ ವಿರುದ್ಧ ಖತರ್ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣವಿರುವುದರಿಂದ, ಅವರ ಬಿಡುಗಡೆ ವಿಳಂಬವಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಅರುಣ್ ಕುಮಾರ್ ಚಟರ್ಜಿ ತಿಳಿಸಿದ್ದಾರೆ.
ಅನಿರ್ದಿಷ್ಟ ಆರೋಪಗಳಿಗಾಗಿ ಮರಣ ದಂಡನೆಗೆ ಗುರಿಯಾಗಿದ್ದ ಎಂಟು ಮಂದಿ ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳನ್ನು ಕಳೆದ ವರ್ಷ ಖತರ್ ನ್ಯಾಯಾಲಯ ಬಿಡುಗಡೆಗೊಳಿಸಿತ್ತು. ಈ ಪೈಕಿ ಏಳು ಮಂದಿ ಅಧಿಕಾರಿಗಳು ಭಾರತಕ್ಕೆ ಮರಳಿದ್ದರೂ, ಪೂರ್ಣೇಂದು ತಿವಾರಿ ಮಾತ್ರ ಖತರ್ ನಲ್ಲಿಯೇ ಉಳಿದಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಕುಮಾರ್ ಚಟರ್ಜಿ, “ಅವರ ಪ್ರಕರಣವು ಖತರ್ ನ ಸ್ಥಳೀಯ ನ್ಯಾಯಾಲಯದಲ್ಲಿ ಈಗಲೂ ನ್ಯಾಯಾಂಗ ನಿಂದನೆಯಾಗಿ ಉಳಿದಿದೆ” ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಪ್ರಶ್ನೆಗೊಳಗಾಗಿರುವ ನ್ಯಾಯಾಂಗ ನಿಂದನೆ ಪ್ರಕರಣವು ಪೂರ್ಣೇಂದು ತಿವಾರಿ ಮರಣ ದಂಡನೆಗೆ ಗುರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಎಂದು ಹೇಳಲಾಗಿದೆ.
ಆದರೆ, ಭಾರತಕ್ಕೆ ಅಧಿಕೃತ ಭೇಟಿಯಲ್ಲಿರುವ ಖತರ್ ಮುಖ್ಯಸ್ಥ ಶೇಖ್ ತಮೀಮ್ ಬಿನ್ ಹಮದ್ ಅಲ್-ತನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ಮಾತುಕತೆಯ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪವಾಗಲಿಲ್ಲ.
ಸುಮಾರು 600 ಮಂದಿ ಭಾರತೀಯ ಪ್ರಜೆಗಳನ್ನು ಖತರ್ ನ ವಿವಿಧ ಜೈಲುಗಳಲ್ಲಿಡಲಾಗಿದೆ. 2024ರಲ್ಲಿ ಸುಮಾರು 85 ಮಂದಿ ಭಾರತೀಯರಿಗೆ ಕ್ಷಮಾದಾನ ಮಂಜೂರು ಮಾಡಲಾಗಿತ್ತು.
ರಕ್ಷಣೆ ಹಾಗೂ ಭದ್ರತೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ಖತರ್ ಸರಕಾರಕ್ಕೆ ಪೂರೈಸುವುದರಲ್ಲಿ ತಜ್ಞತೆ ಹೊಂದಿರುವ ಕಂಪೆನಿಯಾದ ಡಹ್ರಾ ಗ್ಲೋಬಲ್ ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಎಂಟು ಮಂದಿ ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳನ್ನು ಯಾವುದೇ ನಿರ್ದಿಷ್ಟ ಆರೋಪಗಳಿಲ್ಲದೆ ಆಗಸ್ಟ್ 2022ರಲ್ಲಿ ಖತರ್ ಪ್ರಾಧಿಕಾರಗಳು ಬಂಧಿಸಿದ್ದವು. ಅವರ ಬಂಧನಕ್ಕೆ ಕಾರಣಗಳೇನು ಎಂಬುದು ಬಹಿರಂಗವಾಗಲೂ ಇಲ್ಲ.
ನಂತರ, 2023ರಲ್ಲಿ ಈ ಮಾಜಿ ಭಾರತೀಯ ನೌಕಾಪಡೆ ಅಧಿಕಾರಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈ ಕ್ರಮದ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿದ್ದ ಭಾರತ ಸರಕಾರ, ಶಿಕ್ಷೆಯನ್ನು ಮರುಪರಿಗಣಿಸುವಂತೆ ಮನವಿ ಮಾಡಿತ್ತು.
ಡಿಸೆಂಬರ್ 2023ರಲ್ಲಿ ಈ ಮಾಜಿ ನೌಕಾಪಡೆ ಅಧಿಕಾರಿಗಳಿಗೆ ದೂತಾವಾಸದ ಸಂಪರ್ಕವನ್ನು ಮಂಜೂರು ಮಾಡಿದ್ದ ಖತರ್, ಮರಣ ದಂಡನೆ ಶಿಕ್ಷೆಯನ್ನು ವಿಭಿನ್ನ ಅವಧಿಯ ಸೆರೆವಾಸದ ಶಿಕ್ಷೆಗೆ ತಗ್ಗಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ಖತರ್ ಗೆ ಭೇಟಿಯ ಕೆಲವೇ ದಿನಗಳ ಮುನ್ನ, ನೌಕಾಪಡೆಯ ಮಾಜಿ ಸಿಬ್ಬಂದಿಗಳಾದ ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಸೌರಭ್ ವಸಿಷ್ಠ್, ಕ್ಯಾಪ್ಟನ್ ಬಿರೇಂದ್ರ ಕುಮಾರ್ ವರ್ಮ, ಕಮಾಂಡರ್ ಸುಗುಣಾಕರ್ ಪಕಲ, ಕಮಾಂಡರ್ ಸಂಜೀವ್ ಗುಪ್ತಾ, ಕಮಾಂಡರ್ ಅಮಿತ್ ನಾಗಪಾಲ್ ಹಾಗೂ ನಾವಿಕ ರಾಗೇಶ್ ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಭಾರತಕ್ಕೆ ಮರಳಿದ್ದರು. ಆದರೆ, ಎಂಟನೆಯವರಾದ ಕಮಾಂಡರ್ ಪೂರ್ಣೇಂದು ತಿವಾರಿ ದೋಹಾದಲ್ಲೇ ಉಳಿದಿದ್ದಾರೆ.