ಕಲ್ಲುಗಣಿಗಾರಿಕೆ ಘಟಕ | ಉತ್ತರಾಖಂಡ ಸರಕಾರಕ್ಕೆ 50,000 ರೂ.ದಂಡ ವಿಧಿಸಿದ ಎನ್‌ಜಿಟಿ
Photo Credit : PTI
ಡೆಹ್ರಾಡೂನ್,ನ.27: ಪರಿಸರ ಸೂಕ್ಷ್ಮ ಶಿವಾಲಿಕ್ ಆನೆ ಅಭಯಾರಣ್ಯ ಮತ್ತು ಸಾಂಗ್ ನದಿಯ ಪ್ರವಾಹ ಪ್ರದೇಶದಲ್ಲಿ ಕಾನೂನುಬಾಹಿರ ಜಲ್ಲಿ ತಯಾರಿಕೆ ಘಟಕ ಕಾರ್ಯ ನಿರ್ವಹಿಸುತ್ತಿರುವುದನ್ನು ದೃಢಪಡಿಸಿಕೊಂಡ ಬಳಿಕ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು (ಎನ್‌ಜಿಟಿ) ಉತ್ತರಾಖಂಡ ಸರಕಾರಕ್ಕೆ 50,000 ರೂ.ಗಳ ದಂಡವನ್ನು ವಿಧಿಸಿದೆ.
ಸಂರಕ್ಷಿತ ವಲಯದಲ್ಲಿ ಜಲ್ಲಿ ತಯಾರಿಕೆ ಘಟಕ ಕಾರ್ಯಾಚರಿಸುತ್ತಿರುವುದು ತೀವ್ರ ಪರಿಸರ ಉಲ್ಲಂಘನೆಯಾಗಿದೆ ಮತ್ತು ಸ್ಥಳೀಯ ವನ್ಯಜೀವಿಗಳಿಗೆ ಅಪಾಯವನ್ನುಂಟು ಮಾಡುತ್ತಿದೆ ಎಂದು ದೂರಿ ಡೆಹ್ರಾಡೂನ್ ನಿವಾಸಿಗಳ ಪರ ವಕೀಲ ಗೌರವ್ ಕುಮಾರ್ಬನ್ಸಾಲ್ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಎನ್‌ಜಿಟಿ ಈ ಆದೇಶವನ್ನು ಹೊರಡಿಸಿದೆ.
ಎನ್‌ಜಿಟಿಯ ನಿರ್ಧಾರವು ಭಾರತೀಯ ವನ್ಯಜೀವಿ ಸಂಸ್ಥೆಯ (ಡಬ್ಲ್ಯುಐಐ) ವಿವರವಾದ ವರದಿಯನ್ನು ಆಧರಿಸಿದೆ. ಜಲ್ಲಿ ತಯಾರಿಕೆ ಘಟಕವು ಅಧಿಸೂಚಿತ ಆನೆ ಮೀಸಲು ಪ್ರದೇಶದೊಳಗೆ ಮತ್ತು ಗಂಗಾ ನದಿಯ ಪ್ರಮುಖ ಉಪನದಿಯಾಗಿರುವ ಸಾಂಗ್ ನ ಸಕ್ರಿಯ ಪ್ರವಾಹ ಪ್ರದೇಶದಲ್ಲಿದೆ ಎಂದು ವರದಿಯು ದೃಢಪಡಿಸಿದೆ.
ಈ ಸ್ಥಳದಲ್ಲಿ ಕೈಗಾರಿಕಾ ಚಟುವಟಿಕೆಯು ವನ್ಯಜೀವಿಗಳ ಪ್ರಮುಖ ಆವಾಸಸ್ಥಾನಗಳಿಗೆ ಅಪಾಯವನ್ನುಂಟು ಮಾಡುತ್ತಿದೆ ಎಂದು ಎಚ್ಚರಿಕೆ ನೀಡಿರುವ ಡಬ್ಲ್ಯುಐಐ ವರದಿಯು, ನದಿ ಮತ್ತು ಸುತ್ತುಮುತ್ತಲಿನ ಪೊದೆಗಳ ಪ್ರದೇಶವು ಆನೆ, ಹುಲಿ, ಚಿರತೆ ಮತ್ತು ಇತರ ದೊಡ್ಡ ಸಸ್ತನಿಗಳ ಪ್ರಮುಖ ಸಂಚಲನ ಮಾರ್ಗವಾಗಿದೆ. ಕೈಗಾರಿಕಾ ಘಟಕದ ಉಪಸ್ಥಿತಿಯು ಈ ಪರಿಸರ ಮಾರ್ಗವನ್ನು ಕಿರಿದಾಗಿಸಿದೆ ಮತ್ತು ವನ್ಯಜೀವಿಗಳ ಚಲನವಲನಗಳಿಗೆ ತೀವ್ರ ಅಡ್ಡಿಯನ್ನುಂಟು ಮಾಡಿದೆ ಎಂದು ಹೇಳಿದೆ.
ಎನ್‌ಜಿಟಿ ದಂಡ ವಿಧಿಸುವ ಜೊತೆಗೆ ಈ ಸ್ಥಳವು ವನ್ಯಜೀವಿ ಕಾರಿಡಾರ್ ಮತ್ತು ಸಕ್ರಿಯ ಪ್ರವಾಹ ಪ್ರದೇಶವಾಗಿದ್ದರೂ ಜಲ್ಲಿ ತಯಾರಿಕೆ ಘಟಕಕ್ಕೆ ಅನುಮತಿಯನ್ನು ನೀಡಿದ್ದು ಹೇಗೆ ಎನ್ನುವುದನ್ನು ವಿವರಿಸಿ ವೈಯಕ್ತಿಕವಾಗಿ ಅಫಿಡವಿಟ್ ಸಲ್ಲಿಸುವಂತೆ ಉತ್ತರಾಖಂಡ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಗೆ ನಿರ್ದೇಶನವನ್ನೂ ನೀಡಿದೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಕೀಲ ಬನ್ಸಾಲ್, ಸರಕಾರದ ಈ ಲೋಪವು ಆನೆಗಳು ಮತ್ತು ಇತರ ವನ್ಯಜೀವಿಗಳ ಉಳಿವಿಗೆ ಬೆದರಿಕೆಯನ್ನೊಡ್ಡಿದೆ. ಪರಿಸರ ಸೂಕ್ಷ್ಮ ವಲಯದಲ್ಲಿ ಇಂತಹ ಕೈಗಾರಿಕಾ ಘಟಕಕ್ಕೆ ಅನುಮತಿ ನೀಡಿರುವುದು ಪರಿಸರ ಸಂರಕ್ಷಣೆಯಲ್ಲಿ ಸರಕಾರದ ಬದ್ಧತೆಯನ್ನು ಕಳಪೆಯಾಗಿ ಬಿಂಬಿಸುತ್ತದೆ ಎಂದು ಹೇಳಿದರು.