×
Ad

ರಾಯ್‌ಬರೇಲಿ |ಗುಂಪು ಥಳಿತದಿಂದ ಮೃತಪಟ್ಟ ದಲಿತ ವ್ಯಕ್ತಿಯ ಕುಟುಂಬವನ್ನು ಭೇಟಿಯಾದ ರಾಹುಲ್ ಗಾಂಧಿ

ಭೇಟಿಗೆ ನಿರ್ಭಂಧಿಸಿದ್ದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

Update: 2025-10-17 12:17 IST

Photo credit: PTI

ರಾಯ್‌ಬರೇಲಿ: ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಗುಂಪಿನಿಂದ ಥಳಿಸಿ ದಲಿತನ ಹತ್ಯೆ ಪ್ರಕರಣದ ಸಂತ್ರಸ್ತ ಕುಟುಂಬವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಭೇಟಿಯಾದರು. ಅಕ್ಟೋಬರ್ 2ರಂದು ಗ್ರಾಮಸ್ಥರು ಕಳ್ಳನೆಂದು ಭಾವಿಸಿ ಹರಿಓಮ್ ಎಂಬ ದಲಿತ ವ್ಯಕ್ತಿಯನ್ನು ಹತ್ಯೆ ಮಾಡಿದ್ದರು.

ಕುಟುಂಬದವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, “ಇಂದು ಬೆಳಿಗ್ಗೆ ಸರ್ಕಾರ ಕುಟುಂಬಕ್ಕೆ ನನ್ನನ್ನು ಭೇಟಿಯಾಗದಂತೆ ಬೆದರಿಕೆ ಹಾಕಿದೆ. ಕುಟುಂಬ ನನ್ನನ್ನು ಭೇಟಿಯಾದರೂ ಅಥವಾ ಇಲ್ಲದಿದ್ದರೂ ಅದು ಪ್ರಮುಖ ವಿಷಯವಲ್ಲ; ಆದರೆ ಅವರು ನಿರಪರಾಧಿಗಳು, ಯಾವುದೇ ತಪ್ಪು ಮಾಡಿಲ್ಲ,” ಎಂದು ಸರ್ಕಾರದ ನಿಲುವಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

“ದೇಶದಾದ್ಯಂತ ದಲಿತರ ಮೇಲಿನ ಹಿಂಸಾಚಾರದ ಘಟನೆಗಳು ನಡೆಯುತ್ತಿದೆ. ಕಾಂಗ್ರೆಸ್ ಸದಾ ಸಂತ್ರಸ್ಥರೊಂದಿಗೆ ನಿಂತುಕೊಳ್ಳುತ್ತದೆ. ನಾವು ನ್ಯಾಯಕ್ಕಾಗಿ ಹೋರಾಡುತ್ತೇವೆ ಮತ್ತು ಕುಟುಂಬಕ್ಕೆ ಎಲ್ಲ ರೀತಿಯ ಸಹಾಯ ಒದಗಿಸುತ್ತೇವೆ,” ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.

ಈ ಘಟನೆ ರಾಜ್ಯದಾದ್ಯಂತ ಆಕ್ರೋಶ ಹುಟ್ಟುಹಾಕಿದ್ದು, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. “ದಲಿತರ ರಕ್ಷಣೆಯಲ್ಲಿ ಹಾಗೂ ಗುಂಪು ಹಿಂಸಾಚಾರ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ” ಎಂದು ಆರೋಪಿಸಿವೆ.

ಗುಂಪು ಹತ್ಯೆ ಘಟನೆಯ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಕ್ಟೋಬರ್ 10ರಂದು ನಡೆದ ಎನ್‌ಕೌಂಟರ್ ನಂತರ ಪ್ರಮುಖ ಆರೋಪಿ ಸೇರಿ 14 ಮಂದಿಯನ್ನು ಬಂಧಿಸಿದ್ದಾರೆ. ತನಿಖೆಯಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಇಬ್ಬರು ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಐದು ಮಂದಿ ಪೊಲೀಸರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.

ಉಂಚಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಇತ್ತೀಚೆಗೆ ಕಳ್ಳತನದ ಭೀತಿಯಿಂದ ಗ್ರಾಮಸ್ಥರು ರಾತ್ರಿ ಜಾಗರಣೆ ಮಾಡುತ್ತಿದ್ದರು. ಗಸ್ತು ತಿರುಗುತ್ತಿದ್ದರು. ಅಕ್ಟೋಬರ್ 2ರಂದು ಜಮುನಾಪುರ್ ಕ್ರಾಸಿಂಗ್ ಬಳಿ ಓಡಾಡುತ್ತಿದ್ದಾಗ ಹರಿಓಮ್ ಅವರನ್ನು ಅನುಮಾನಾಸ್ಪದ ವ್ಯಕ್ತಿ ಎಂದು ಭಾವಿಸಿ ಕೆಲವು ಗ್ರಾಮಸ್ಥರು ಪ್ರಶ್ನಿಸಲು ಮುಂದಾದರು. ಆತ ಸ್ಪಷ್ಟ ಉತ್ತರ ನೀಡದ ಹಿನ್ನೆಲೆಯಲ್ಲಿ ಕಳ್ಳನೆಂದು ತಪ್ಪಾಗಿ ಭಾವಿಸಿ ಗ್ರಾಮಸ್ಥರು ಕ್ರೂರವಾಗಿ ಹಲ್ಲೆ ನಡೆಸಿದ ಪರಿಣಾಮ ಹರಿಓಮ್ ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News