×
Ad

ರಾಹುಲ್ ಗಾಂದಿ ವಿದೇಶಿ ಶಕ್ತಿಗಳ ದಾಳವಾಗಿ ಕೆಲಸ ಮಾಡುತ್ತಿದ್ದಾರೆ: ಬಿಜೆಪಿ ಐಟಿ ಘಟಕ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪ

Update: 2025-02-20 20:16 IST

ರಾಹುಲ್ ಗಾಂದಿ | PTI 

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುವ ಜಾಗತಿಕ ಜಾಲಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ಬಿಜೆಪಿ ಮಾಹಿತಿ ತಂತ್ರಜ್ಞಾನ (ಐಟಿ) ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಗುರುವಾರ ಆರೋಪಿಸಿದ್ದಾರೆ.

ಹಿಂದಿನ ಜೋ ಬೈಡನ್ ಆಡಳಿತವು ಭಾರತದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿತ್ತು ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ ಬಳಿಕ ಮಾಳವೀಯ ಈ ಆರೋಪ ಮಾಡಿದ್ದಾರೆ.

2024ರ ಲೋಕಸಭಾ ಚುನಾವಣೆಯ ಮೊದಲು, ರಾಹುಲ್ ಗಾಂಧಿ ಭಾರತೀಯ ವ್ಯವಹಾರಗಳಲ್ಲಿ ವಿದೇಶಿ ಹಸ್ತಕ್ಷೇಪವನ್ನು ಬಯಸಿದ್ದರು ಎನ್ನುವುದು ಡೊನಾಲ್ಡ್ ಟ್ರಂಪ್‌ ರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ ಎಂದು ಮಾಳವೀಯ ಆರೋಪಿಸಿದರು.

ರಾಹುಲ್ ಗಾಂಧಿ 2023ರಲ್ಲಿ ಲಂಡನ್‌ ನ ಭಾರತೀಯ ಪತ್ರಕರ್ತರ ಸಂಘದೊಂದಿಗೆ ನಡೆಸಿದ ಸಂವಾದದ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಾಕಿದ ಮಾಳವೀಯ, ‘‘2024ರ ಲೋಕಸಭಾ ಚುನಾವಣೆಗೆ ಮುನ್ನ, 2023 ಮಾರ್ಚ್‌ನಲ್ಲಿ ರಾಹುಲ್ ಗಾಂಧಿ ಲಂಡನ್‌ ನಲ್ಲಿದ್ದರು. ಭಾರತದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುವಂತೆ ಅಮೆರಿಕದಿಂದ ಯುರೋಪ್‌ವರೆಗಿನ ವಿದೇಶಿ ಶಕ್ತಿಗಳನ್ನು ಅವರು ಅಂದು ಒತ್ತಾಯಿಸಿದ್ದರು’’ ಎಂಬುದಾಗಿ ಬರೆದಿದ್ದಾರೆ.

‘‘ಭಾರತದ ರಕ್ಷಣಾ ಮತ್ತು ಜಾಗತಿಕ-ರಾಜಕೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುವ ಜಾಗತಿಕ ಜಾಲಗಳೊಂದಿಗೆ ರಾಹುಲ್ ಗಾಂಧಿ ಕೈಜೋಡಿಸಿದ್ದಾರೆ. ಅವರು ವಿದೇಶಿ ಸಂಸ್ಥೆಗಳ ದಾಳವಾಗಿ ಕೆಲಸ ಮಾಡಿದ್ದಾರೆ. ಭಾರತೀಯ ಚುನಾವಣೆಯಲ್ಲಿ ಪ್ರಭಾವ ಬೀರಿ, ನರೇಂದ್ರ ಮೋದಿಯವರಿಗೆ ಬದಲಾಗಿ ಬೇರೊಬ್ಬರನ್ನು ಪ್ರಧಾನಿಯಾಗಿಸಲು ಪ್ರಯತ್ನವೊಂದನ್ನು ನಡೆಸಲಾಗಿತ್ತು ಎನ್ನುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ’’ ಎಂದು ಮಾಳವೀಯ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News