ಸಾವರ್ಕರ್ ಮಾನಹಾನಿ ಪ್ರಕರಣ | ದೂರುದಾರರು ನಾಥೂರಾಮ್ ಗೋಡ್ಸೆಯ ಸಂಬಂಧಿ: ರಾಹುಲ್ ಗಾಂಧಿ ಆರೋಪ
ರಾಹುಲ್ ಗಾಂಧಿ , ಸಾವರ್ಕರ್ | PC : X
ಪುಣೆ: ಸಾವರ್ಕರ್ ವಿರುದ್ಧ ಮಾನಹಾನಿ ಹೇಳಿಕೆ ಪ್ರಕರಣದ ದೂರುದಾರರಾಗಿರುವ ಸತ್ಯಕಿ ಸಾವರ್ಕರ್ ಅವರು, ಮಹಾತ್ಮ ಗಾಂಧಿಯ ಹಂತಕ ನಾಥೂರಾಮ್ ಗೋಡ್ಸೆಯ ಸಹೋದರ ಗೋಪಾಲ್ ವಿನಾಯಕ್ ಗೋಡ್ಸೆಯ ಮೊಮ್ಮಗ ಎಂಬ ವಾಸ್ತವ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಕುರಿತು ರಾಹುಲ್ ಗಾಂಧಿ ಅವರು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿದ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ಅಮೋಲ್ ಶ್ರೀರಾಮ್ ಶಿಂದೆ, ಈ ಆರೋಪಗಳ ಕುರಿತು ಪ್ರತಿಕ್ರಿಯಿಸುವಂತೆ ದೂರುದಾರ ಸತ್ಯಕಿ ಸಾವರ್ಕರ್ ಅವರಿಗೆ ಸೂಚಿಸಿದರು. ಪ್ರಕರಣದ ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದರು.
2023ರಲ್ಲಿ ಲಂಡನ್ ಗೆ ಭೇಟಿ ನೀಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಹಿಂದುತ್ವದ ಸಿದ್ಧಾಂತವಾದಿ ವಿನಾಯಕ್ ದಾಮೋದರ್ ಸಾವರ್ಕರ್ ವಿರುದ್ಧ ಮಾನಹಾನಿಕಾರಕ ಹೇಳಿಕೆ ನೀಡಿದ್ದಾರೆ ಎಂದು ದೂರುದಾರ ಸತ್ಯಕಿ ಸಾವರ್ಕರ್ ಮಾನಹಾನಿ ಮೊಕದ್ದಮೆಯಲ್ಲಿ ಆರೋಪಿಸಿದ್ದರು.
ಈ ವೇಳೆ, ಸಾವರ್ಕರ್ ಅವರ ಬರಹಗಳಲ್ಲಿನ ಘಟನೆಯೊಂದನ್ನು ಉಲ್ಲೇಖಿಸಿದ್ದ ರಾಹುಲ್ ಗಾಂಧಿ, ಸಾವರ್ಕರ್ ತಮ್ಮ ಪತ್ರವೊಂದರಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸುವುದು ಆನಂದವನ್ನುಂಟು ಮಾಡುತ್ತದೆ ಎಂದು ಹೇಳಿದ್ದರು. ಆದರೆ, ಅಂತಹ ಯಾವುದೇ ವಾಕ್ಯ ವೃಂದವೂ ಅವರ ಬರಹಗಳಲ್ಲಿಲ್ಲ ಎಂದು ಪ್ರತಿಪಾದಿಸಿದ್ದ ಸತ್ಯಕಿ ಸಾವರ್ಕರ್, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನಹಾನಿ) ಅಡಿ ರಾಹುಲ್ ಗಾಂಧಿಯನ್ನು ದೋಷಿ ಎಂದು ಘೋಷಿಸಬೇಕು. ಅಪರಾಧ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 357 ಅಡಿ ಅವರಿಂದ ಪರಿಹಾರ ಕೊಡಿಸಬೇಕು ಎಂದು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ, “ಈ ಮಾನಹಾನಿ ಪ್ರಕರಣವನ್ನು ತೀರ್ಮಾನಿಸುವಲ್ಲಿ ನಿರ್ಣಾಯಕವಾಗಿರುವ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯೊಂದಿಗೆ ಹೊಂದಿರುವ ನೇರ ಕೌಟುಂಬಿಕ ಸಂಬಂಧವನ್ನು ದೂರುದಾರ ಸತ್ಯಕಿ ಸಾವರ್ಕರ್ ಉದ್ದೇಶಪೂರ್ವಕವಾಗಿ ಬಚ್ಚಿಟ್ಟಿದ್ದಾರೆ” ಎಂದು ರಾಹುಲ್ ಗಾಂಧಿ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಇದಲ್ಲದೆ, ದೂರುದಾರ ಸತ್ಯಕಿ ಸಾವರ್ಕರ್ ಸುಳ್ಳು, ಮಾನಹಾನಿಕಾರಕ ಹಾಗೂ ನ್ಯಾಯಾಂಗ ನಿಂದನೆಯ ದೂರು ಸಲ್ಲಿಸಿದ್ದಾರೆ ಎಂದು ಆರೋಪಿಸಿ, ಮತ್ತೊಂದು ಪ್ರತ್ಯೇಕ ಅರ್ಜಿಯನ್ನೂ ರಾಹುಲ್ ಗಾಂಧಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಮೇ 9ರಂದು ದೂರುದಾರ ಸತ್ಯಕಿ ಸಾವರ್ಕರ್, ನಾನು ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದೇನೆ ಎಂದು ದಾರಿ ತಪ್ಪಿಸುವ ಅರ್ಜಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ ಎಂದು ಈ ಅರ್ಜಿಯಲ್ಲಿ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಎರಡೂ ಪ್ರತ್ಯೇಕ ಅರ್ಜಿಗಳ ಕುರಿತು ಪ್ರತಿಕ್ರಿಯೆ ನೀಡುವಂತೆ ದೂರುದಾರ ಸತ್ಯಕಿ ಸಾವರ್ಕರ್ ಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಸೌಜನ್ಯ: barandbench.com