ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್: ರಾಹುಲ್ ಗಾಂಧಿ ಆರೋಪ
ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ನವೆಂಬರ್ 2024ರಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಮ್ಯಾಚ್ ಫಿಕ್ಸಿಂಗ್ ನಡೆಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ನಡೆದಿದ್ದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಹಾಗೂ ಅಜಿತ್ ಪವಾರ್ ನಾಯಕತ್ವದ ಎನ್‌ಸಿಪಿಯನ್ನು ಒಳಗೊಂಡಿರುವ ಮಹಾಯುತಿ ಮೈತ್ರಿಕೂಟವು 288 ಸ್ಥಾನಗಳ ಪೈಕಿ, 235 ಸ್ಥಾನಗಳಲ್ಲಿ ಭರ್ಜರಿ ಜಯಭೇರಿ ಬಾರಿಸಿತ್ತು. ಈ ಪೈಕಿ ಬಿಜೆಪಿಯೊಂದೇ 132 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ, ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ತನ್ನ ಅತ್ಯುತ್ತಮ ಸಾಧನೆ ಮಾಡಿತ್ತು.
ಈ ಕುರಿತು Indian Express ದಿನಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಲೇಖನ ಬರೆದಿರುವ ರಾಹುಲ್ ಗಾಂಧಿ, "ಮಹಾರಾಷ್ಟ್ರದಲ್ಲಿನ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಬುಡಮೇಲಾಗಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಐದು ಹಂತದ ಮಾದರಿಗಳನ್ನು ಕಾರ್ಯಗತಗೊಳಿಸಿದೆ" ಎಂದು ಆರೋಪಿಸಿದ್ದಾರೆ.
"ಮೊದಲ ಹಂತ ಚುನಾವಣಾ ಆಯೋಗ ನೇಮಕಾತಿಯ ತಿರುಚುವಿಕೆ, ಎರಡನೆ ಹಂತ ಮತಪಟ್ಟಿಗೆ ನಕಲಿ ಮತದಾರರ ಸೇರ್ಪಡೆ, ಮೂರನೆಯ ಹಂತ ಮತದಾನ ಪ್ರಮಾಣದಲ್ಲಿ ಏರಿಕೆ, ನಾಲ್ಕನೆಯ ಹಂತ ಬಿಜೆಪಿ ಗೆಲ್ಲಬೇಕಾದ ಅಗತ್ಯವಿರುವೆಡೆ ನಕಲಿ ಮತದಾನ ನಡೆಸುವುದು ಹಾಗೂ ಐದನೆಯ ಹಂತ ಸಾಕ್ಷ್ಯಾಧಾರಗಳನ್ನು ಬಚ್ಚಿಡುವುದು" ಎಂದು ಅವರು ವಿಸ್ತ್ರತ ಆರೋಪ ಮಾಡಿದ್ದಾರೆ. ಅಲ್ಲದೆ ಈ ಲೇಖನದ ಪುಟವನ್ನು ಅವರು ತಮ್ಮ ಎಕ್ಸ್ ಪೋಸ್ಟ್‌ನೊಂದಿಗೂ ಹಂಚಿಕೊಂಡಿದ್ದಾರೆ.
"ನಾನು ಸಣ್ಣ ಪ್ರಮಾಣದ ವಂಚನೆಯ ಕುರಿತು ಮಾತನಾಡುತ್ತಿಲ್ಲ. ಬದಲಿಗೆ ನಮ್ಮ ರಾಷ್ಡ್ರೀಯ ಸಂಸ್ಥೆಗಳನ್ನು ಕೈವಶ ಮಾಡಿಕೊಂಡು ಬೃಹತ್ ಪ್ರಮಾಣದ ವಂಚನೆ ಎಸಗಲಾಗಿದೆ" ಎಂದೂ ಅವರು ನೇರವಾಗಿ ಆರೋಪಿಸಿದ್ದಾರೆ.
ಆದರೆ, ರಾಹುಲ್ ಗಾಂಧಿಯ ಆರೋಪಗಳನ್ನು ತಳ್ಳಿ ಹಾಕಿರುವ ಚುನಾವಣಾ ಆಯೋಗ, ನಮ್ಮ ಕಾರ್ಯವಿಧಾನ ಸ್ವಾಯತ್ತವಾಗಿಯೇ ಉಳಿದಿದ್ದು, ನಾವು ಸಾಂವಿಧಾನಿಕ ಕಾನೂನುಗಳಿಗೆ ಕಟಿಬದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದೆ.
ಈ ನಡುವೆ, ರಾಹುಲ್ ಗಾಂಧಿಯ ಆರೋಪಗಳನ್ನು 'ಅಪಮಾನಕಾರಿ' ಎಂದು ಟೀಕಿಸಿರುವ ಬಿಜೆಪಿ, "ರಾಷ್ಟ್ರೀಯ ಸಂಸ್ಥೆಗಳಿಗೆ ಕಳಂಕ ಹಚ್ಚುವ ಮೂಲಕ, ರಾಹುಲ್ ಗಾಂಧಿ ಮತ್ತೆ ಅಪಮಾನಕಾರಿ ಚಾಳಿಗೆ ಮರಳಿದ್ದಾರೆ. ಈ ಆರೋಪಗಳ ಕುರಿತು ಚುನಾವಣಾ ಆಯೋಗವು ಪದೇ ಪದೇ ನಿಖರವಾಗಿ ವಿವರಿಸಿದೆ" ಎಂದು ತಿರುಗೇಟು ನೀಡಿದೆ.
ನವೆಂಬರ್ 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಹಾಗೂ ಅಜಿತ್ ಪವಾರ್ ನಾಯಕತ್ವದ ಎನ್‌ಸಿಪಿಯನ್ನೊಳಗೊಂಡಿದ್ದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಅಮೋಘ ಗೆಲುವು ಸಾಧಿಸಿತ್ತು. ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ಶರದ್ ಪವಾರ್ ನಾಯಕತ್ವದ ಎನ್‌ಸಿಪಿಯನ್ನೊಳಗೊಂಡಿದ್ದ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಸಂಖ್ಯಾಬಲ ಕೇವಲ 50 ಸ್ಥಾನಕ್ಕೆ ಕುಸಿದಿತ್ತು.
ಚುನಾವಣೆಗೂ ಕೆಲವೇ ತಿಂಗಳ ಹಿಂದೆ ತಮ್ಮ ತಮ್ಮ ಪಕ್ಷಗಳ ಅಧಿಕೃತ ಚಿಹ್ನೆಗಳ ಮೇಲೆ ನಿಯಂತ್ರಣ ಕಳೆದುಕೊಂಡಿದ್ದ ಎನ್‌ಸಿಪಿ (ಎಸ್‌ಪಿ) ವರಿಷ್ಠ ಶರದ್ ಪವಾರ್ ಹಾಗೂ ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆಗೆ ಈ ಫಲಿತಾಂಶ ಮರ್ಮಾಘಾತ ನೀಡಿತ್ತು.