×
Ad

ವಿದ್ಯಾರ್ಥಿ ವೇತನ ವಿಳಂಬ ಹಾಗೂ ವಿದ್ಯಾರ್ಥಿ ನಿಲಯಗಳ ಶೋಚನೀಯ ಪರಿಸ್ಥಿತಿ ಕುರಿತು ಪ್ರಧಾನಿಗೆ ರಾಹುಲ್ ಗಾಂಧಿ ಪತ್ರ

Update: 2025-06-11 19:00 IST

 ರಾಹುಲ್ ಗಾಂಧಿ | PC ; PTI 

ಹೊಸದಿಲ್ಲಿ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು, ಆರ್ಥಿಕವಾಗಿ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿ ನಿಲಯಗಳ ಶೋಚನೀಯ ಪರಿಸ್ಥಿತಿ ಹಾಗೂ ವಂಚಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ನೀಡುವಲ್ಲಿನ ವಿಳಂಬವನ್ನು ಟೀಕಿಸಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಈ ಎರಡು ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವಂತೆ ಆಗ್ರಹಿಸಿರುವ ಅವರು, ಈ ಸಮಸ್ಯೆಗಳಿಂದ ಶೇ. 90ರಷ್ಟು ವಂಚಿತ ಸಮುದಾಯಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

"ಮೊದಲನೆಯದಾಗಿ, ದೇಶದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳು, ಇತರೆ ಹಿಂದುಳಿದ ವರ್ಗಗಳು, ಅರ್ಥಿಕವಾಗಿ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿ ನಿಲಯಗಳ ಪರಿಸ್ಥಿತಿ ಶೋಚನೀಯವಾಗಿದೆ. ಇತ್ತೀಚೆಗೆ ನಾನು ಬಿಹಾರದ ದರ್ಭಾಂಗದಲ್ಲಿರುವ ಅಂಬೇಡ್ಕರ್ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ್ದಾಗ, ಅಲ್ಲಿನ ವಿದ್ಯಾರ್ಥಿಗಳು ಕೊಠಡಿ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಶುಚಿತ್ವವಿಲ್ಲದ ಶೌಚಾಲಯಗಳು ಹಾಗೂ ಅಂತರ್ಜಾಲ ವ್ಯವಸ್ಥೆಯ ಅಲಭ್ಯತೆ ಕುರಿತು ದೂರು ನೀಡಿದ್ದರು" ಎಂದು ಅವರು ತಮ್ಮ ಪತ್ರದಲ್ಲಿ ಪ್ರಧಾನಿಗೆ ವಿವರಿಸಿದ್ದಾರೆ.

"ಎರಡನೆಯದಾಗಿ, ವಂಚಿತ ಸಮುದಾಯಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ದೊರೆಯುತ್ತಿಲ್ಲ. ಬಿಹಾರದಲ್ಲಿ ಮೂರು ವರ್ಷಗಳಿಂದ ವಿದ್ಯಾರ್ಥಿ ವೇತನ ಪೋರ್ಟಲ್ ಕಾರ್ಯನಿರ್ವಹಿಸುತ್ತಿಲ್ಲ. 2021-22ನೇ ಸಾಲಿನಲ್ಲಿ ಯಾವ ವಿದ್ಯಾರ್ಥಿಗೂ ವಿದ್ಯಾರ್ಥಿ ವೇತನ ದೊರೆತಿಲ್ಲ" ಎಂದು ಅವರು ಪ್ರಧಾನಿಯ ಗಮನಕ್ಕೆ ತಂದಿದ್ದಾರೆ.

"ಈ ಸಮಸ್ಯೆಗಳು ಬಿಹಾರ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಇದೆ. ಈ ವೈಫಲ್ಯಗಳನ್ನು ಸರಿಪಡಿಸಲು ಸರಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು" ಎಂದು ಅವರು ಆಗ್ರಹಿಸಿದ್ದಾರೆ.

"ವಂಚಿತ ಸಮುದಾಯಗಳ ಮಕ್ಕಳು ಶೈಕ್ಷಣಿಕ ಪ್ರಗತಿ ಹೊಂದದ ಹೊರತು, ಭಾರತ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಈ ಸಂಬಂಧ, ನಿಮ್ಮ ಸಕಾರಾತ್ಮಕ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದೇನೆ" ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News