×
Ad

ಒಡಿಶಾ ವಿದ್ಯಾರ್ಥಿನಿಯ ಸಾವು ವ್ಯವಸ್ಥೆಯಿಂದಾದ ಕೊಲೆ: ಪ್ರಧಾನಿ ಮೌನವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ

Update: 2025-07-15 20:55 IST

 ರಾಹುಲ್ ಗಾಂಧಿ | PC : PTI 

ಹೊಸದಿಲ್ಲಿ: ಪ್ರಾಧ್ಯಾಪಕರ ಲೈಂಗಿಕ ಕಿರುಕುಳದಿಂದ ಬೇಸತ್ತು ಮೈಗೆ ಬೆಂಕಿ ಹಚ್ಚಿಕೊಂಡಿದ್ದ ಒಡಿಶಾದ ಕಾಲೇಜೊಂದರ ವಿದ್ಯಾರ್ಥಿನಿ ಸೋಮವಾರ ರಾತ್ರಿ ಭುವನೇಶ್ವರದ ಏಮ್ಸ್‌ನಲ್ಲಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಮಂಗಳವಾರ ಬಿಜೆಪಿಯನ್ನು ತೀವ್ರ ತರಾಟೆಗೆತ್ತಿಕೊಂಡಿದೆ. ದೇಶಕ್ಕೆ ಉತ್ತರಗಳು ಬೇಕಿವೆ, ಪ್ರಧಾನಿ ನರೇಂದ್ರ ಮೋದಿಯವರ ಮೌನವಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಬಾಲಾಸೋರ್‌ ನ ಫಕೀರ ಮೋಹನ್(ಸ್ವಾಯತ್ತ) ಕಾಲೇಜಿನಲ್ಲಿ ಮೂರನೇ ವರ್ಷದ ಬಿಇ ಓದುತ್ತಿದ್ದ ವಿದ್ಯಾರ್ಥಿನಿ ಮೂರು ದಿನಗಳಿಂದಲೂ ಜೀವನ್ಮರಣ ಹೋರಾಟ ನಡೆಸುತ್ತಿದ್ದಳು.

ದೂರು ನೀಡಿದ್ದರೂ ಕಾಲೇಜಿನ ಆಡಳಿತ ಮಂಡಳಿಯು ಪ್ರಾಧ್ಯಾಪಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ್ದರಿಂದ ಆಕೆ ಶನಿವಾರ ಕಾಲೇಜಿನ ಆವರಣದಲ್ಲಿಯೇ ಮೈಗೆ ಬೆಂಕಿ ಹಚ್ಚಿಕೊಂಡಿದ್ದು,ಶೇ.95ರಷ್ಟು ಸುಟ್ಟ ಗಾಯಗಳಾಗಿದ್ದವು.

ಒಡಿಶಾದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಹೆಣ್ಣುಮಗಳ ಸಾವು ಬಿಜೆಪಿ ವ್ಯವಸ್ಥೆಯಿಂದ ನೇರ ಕೊಲೆಯಾಗಿದೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ರಾಹುಲ್,‘ಆ ಧೈರ್ಯಶಾಲಿ ವಿದ್ಯಾರ್ಥಿನಿ ಲೈಂಗಿಕ ಶೋಷಣೆಯ ವಿರುದ್ಧ ಧ್ವನಿಯೆತ್ತಿದ್ದಳು, ಆದರೆ ಆಕೆಗೆ ನ್ಯಾಯವನ್ನು ಒದಗಿಸುವ ಬದಲು ಪದೇ ಪದೇ ಬೆದರಿಕೆ,ಕಿರುಕುಳಗಳನ್ನು ಒಡ್ಡಲಾಗಿತ್ತು,ಅವಮಾನ ಮಾಡಲಾಗಿತ್ತು. ಆಕೆಯನ್ನು ರಕ್ಷಿಸಬೇಕಿದ್ದವರೇ ಆಕೆಯ ಮೇಲೆ ದಬ್ಬಾಳಿಕೆ ನಡೆಸುತ್ತಲೇ ಇದ್ದರು. ಪ್ರತಿಸಲದಂತೆ ಬಿಜೆಪಿ ವ್ಯವಸ್ಥೆಯು ಈ ಸಲವೂ ಆರೋಪಿಗಳನ್ನು ರಕ್ಷಿಸುತ್ತಲೇ ಇತ್ತು ಮತ್ತು ಅಮಾಯಕ ಹೆಣ್ಣುಮಗಳು ಮೈಗೆ ಬೆಂಕಿ ಹಚ್ಚಿಕೊಳ್ಳುವಂತೆ ಮಾಡಿತ್ತು. ಇದು ಆತ್ಮಹತ್ಯೆಯಲ್ಲ,ಇದು ವ್ಯವಸ್ಥೆಯಿಂದ ನಡೆದ ಸಂಘಟಿತ ಕೊಲೆ ’ಎಂದು ಆರೋಪಿಸಿದ್ದಾರೆ.

‘ಮೋದಿಜಿ, ಒಡಿಶಾ ಆಗಿರಲಿ ಅಥವಾ ಮಣಿಪುರ ಆಗಿರಲಿ...ದೇಶದ ಹೆಣ್ಣುಮಕ್ಕಳು ಸಾಯುತ್ತಿದ್ದಾರೆ. ಆದರೆ ನೀವು ಮೌನವಾಗಿ ಕುಳಿತಿದ್ದೀರಿ.ದೇಶಕ್ಕೆ ನಿಮ್ಮ ಮೌನ ಬೇಕಿಲ್ಲ,ಅದಕ್ಕೆ ಉತ್ತರಗಳು ಬೇಕಿವೆ. ಭಾರತದ ಹೆಣ್ಣುಮಕ್ಕಳು ಭದ್ರತೆ ಮತ್ತು ನ್ಯಾಯವನ್ನು ಬಯಸುತ್ತಿದ್ದಾರೆ’ ಎಂದು ರಾಹುಲ್ ಕಿಡಿಕಾರಿದ್ದಾರೆ.

ಬಿಜೆಪಿ ಸರಕಾರದಿಂದ ನ್ಯಾಯದ ಭರವಸೆಯನ್ನು ತೊರೆದಿದ್ದ ಒಡಿಶಾದ ಹೆಣ್ಣುಮಗಳು ಈ ಲೋಕವನ್ನೂ ತೊರೆದಿದ್ದಾಳೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ವಿಷಾದ ವ್ಯಕ್ತಪಡಿಸಿರುವ ಕಾಂಗ್ರೆಸ್ ಪ್ರ.ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್ ಅವರು, ಆಕೆಗೆ ಕೇವಲ 20 ವರ್ಷ ವಯಸ್ಸಾಗಿತ್ತು. ಆ ಹುಡುಗಿ ಏನೇನನ್ನು ಅನುಭವಿಸಿರಬೇಕು ಎಂಬ ಯೊಚನೆಯ ಮಾತ್ರದಿಂದಲೇ ಬೆನ್ನುಹುರಿಯಲ್ಲಿ ನಡುಕ ಮೂಡುತ್ತದೆ. ತನ್ನದೇ ಕ್ಯಾಂಪಸ್‌ ನಲ್ಲಿ ಆಕೆ ಎಷ್ಟೊಂದು ಅಸಹಾಯಕಳಾಗಿದ್ದಳು. ಬಿಜೆಪಿಯ ಕೊಳೆತ ವ್ಯವಸ್ಥೆಯು ಆಕೆ ಮೈಗೆ ಬೆಂಕಿ ಹಚ್ಚಿಕೊಳ್ಳುವಷ್ಟು ಆಕೆಯನ್ನು ಹತಾಶಳಾಗಿಸಿತ್ತು. ಆಕೆ ನೆರವಿಗಾಗಿ ಕಾಲೇಜು ಪ್ರಾಂಶುಪಾಲರಿಂದ ಹಿಡಿದು ಸಂಸದ,ಮುಖ್ಯಮಂತ್ರಿಯವರೆಗೂ ಪ್ರತಿಯೊಬ್ಬರನ್ನೂ ಬೇಡಿಕೊಂಡಿದ್ದಳು. ಆದರೆ ಅವಳ ಮೊರೆ ಯಾರಿಗೂ ಕೇಳಿಸಲೇ ಇಲ್ಲ ಎಂದಿದ್ದಾರೆ.

‘ಬಿಜೆಪಿ ಸರಕಾರದಲ್ಲಿ ಅಪರಾಧದ ಬಲಿಪಶುಗಳಾದ ಮಹಿಳೆಯರ ಧ್ವನಿಗಳನ್ನು ಕೇಳುವವರೇ ಇಲ್ಲ. ಅವರನ್ನು ರಕ್ಷಿಸಬೇಕಾದವರೇ ಈಗ ದಬ್ಬಾಳಿಕೆಗಾರರೊಂದಿಗೆ ಕೈಜೋಡಿಸಿರುವಾಗ ಅದು ಹೇಗೆ ಸಾಧ್ಯ?’ ಎಂದು ಅವರು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News