×
Ad

ಜೈಶಂಕರ್‌ ಭಾರತದ ವಿದೇಶಾಂಗ ನೀತಿಯನ್ನು ನಾಶಗೊಳಿಸುತ್ತಿದ್ದಾರೆ: ರಾಹುಲ್ ಗಾಂಧಿ

Update: 2025-07-16 16:49 IST

ಎಸ್.ಜೈಶಂಕರ್ | PC:  PTI 

ಹೊಸದಿಲ್ಲಿ: ಸೋಮವಾರ ಚೀನಾಕ್ಕೆ ಭೇಟಿ ನೀಡಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್‌ ಅವರು ಭಾರತ-ಚೀನಾ ನಡುವಿನ ಸಂಬಂಧಗಳು ಸುಧಾರಣೆಗೊಳ್ಳುತ್ತಿವೆ ಎಂದು ಹೇಳಿದ ಬೆನ್ನಿಗೇ ಅವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಕಾಂಗ್ರೆಸ್, ಅವರು ಭಾರತದ ವಿದೇಶಾಂಗ ನೀತಿಯನ್ನು ನಾಶಗೊಳಿಸುತ್ತಿದ್ದಾರೆ ಎಂದು ಆರೋಪಿಸಿದೆ.

‘ಚೀನಾದ ವಿದೇಶಾಂಗ ಸಚಿವರು ಇಲ್ಲಿಗೆ ಬರುತ್ತಾರೆ ಮತ್ತು ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮೋದಿಯವರಿಗೆ ಮಾಹಿತಿ ನೀಡುತ್ತಾರೆ ಎಂದು ನಾನು ಭಾವಿಸಿದ್ದೇನೆ. ಭಾರತದ ವಿದೇಶಾಂಗ ನೀತಿಯನ್ನು ನಾಶಗೊಳಿಸುವ ಗುರಿಯನ್ನು ಹೊಂದಿರುವ ಪೂರ್ಣ ಪ್ರಮಾಣದ ಸರ್ಕಸ್‌ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವರು ಮಾಡುತ್ತಿದ್ದಾರೆ’ ಎಂದು ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಎಕ್ಸ್ ಪೋಸ್ಟ್‌ ನಲ್ಲಿ ಹೇಳಿದ್ದಾರೆ.

ಜೈಶಂಕರ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಕುರಿತು ಸಂಸತ್ತಿನಲ್ಲಿ ವಿವರವಾದ ಚರ್ಚೆಯನ್ನು ಯಾವಾಗ ನಡೆಸುತ್ತಾರೆ ಎಂದು ಮಂಗಳವಾರ ಹೇಳಿಕೆಯೊಂದರಲ್ಲಿ ಪ್ರಶ್ನಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್‌ ಅವರು, ‘ಜು.14ರಂದು ಚೀನಾದ ಉಪಾಧ್ಯಕ್ಷ ಹ್ಯಾನ್ ಝೆಂಗ್ ಅವರೊಂದಿಗೆ ತನ್ನ ಮಾತುಕತೆ ವೇಳೆ ಜೈಶಂಕರ್‌ ಅವರು, ಕಳೆದ ಅಕ್ಟೋಬರ್‌ನಲ್ಲಿ ಕಜಾನ್‌ ನಲ್ಲಿ ಮೋದಿ ಮತ್ತು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಭೇಟಿಯ ಬಳಿಕ ಭಾರತ-ಚೀನಾ ದ್ವಿಪಕ್ಷೀಯ ಸಂಬಂಧವು ಸ್ಥಿರವಾಗಿ ಸುಧಾರಿಸುತ್ತಿದೆ ಮತ್ತು ಅದು ಧನಾತ್ಮಕ ಫಲಿತಾಂಶಗಳನ್ನು ನೀಡಬಹುದು ಎಂದು ಹೇಳಿದ್ದಾರೆ. ಕ್ಸಿ ಅವರೊಂದಿಗೆ ಮೋದಿಯವರ ಭೇಟಿಯ ಬಳಿಕ ದ್ವಿಪಕ್ಷೀಯ ಸಂಬಂಧಗಳಲ್ಲಿ ಇತ್ತೀಚಿನ ಬೆಳವಣಿಗೆಗಳನ್ನು ಬಹುಶಃ ನಾವು ವಿದೇಶಾಂಗ ಸಚಿವರಿಗೆ ನೆನಪಿಸಬೇಕಿದೆ ’ಎಂದು ಹೇಳಿದ್ದಾರೆ.

ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಚೀನಾ ಪಾಕಿಸ್ತಾನಕ್ಕೆ ಸಂಪೂರ್ಣ ಬೆಂಬಲವನ್ನು ನೀಡಿತ್ತು. ಯುದ್ಧವಿಮಾನಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಒದಗಿಸಿತ್ತು ಎಂದು ಹೇಳಿರುವ ರಮೇಶ್‌, ಚೀನಾ ಭಾರತಕ್ಕೆ ರೇರ್ ಅರ್ತ್ ಮ್ಯಾಗ್ನೆಟ್‌ಗಳು, ವಿಶೇಷ ರಸಗೊಬ್ಬರಗಳು ಮತ್ತು ಮೂಲಸೌಕರ್ಯಯೋಜನೆಗಳಿಗೆ ಸುರಂಗ ಕೊರೆಯುವ ಯಂತ್ರಗಳಂತಹ ಪ್ರಮುಖ ಸರಕುಗಳ ರಫ್ತನ್ನು ನಿರ್ಬಂಧಿಸಿದೆ. ದೂರಸಂಪರ್ಕ, ಔಷಧಿ ಮತ್ತು ವಿದ್ಯುನ್ಮಾನದಂತಹ ಪ್ರಮುಖ ಕ್ಷೇತ್ರಗಳು ಈಗಲೂ ಚೀನಾದಿಂದ ಆಮದನ್ನೇ ಅವಲಂಬಿಸಿವೆ. ಚೀನಾದೊಂದಿಗೆ ವ್ಯಾಪಾರ ಕೊರತೆಯು ದಾಖಲೆಯ 99.2 ಶತಕೋಟಿ ಡಾಲರ್ ಗೆ ತಲುಪಿದೆ ಎಂದು ನೆನಪಿಸಿದ್ದಾರೆ.

ಜೈಶಂಕರ್‌ ಅವರ ನಂಬಿಕೆಗಳನ್ನು ನೋಡಿದರೆ ಚೀನಾಕ್ಕೆ ಶರಣಾದರೆ ಅಚ್ಚರಿಯೇನಲ್ಲ ಎಂದು ಹೇಳಿರುವ ರಮೇಶ್‌, ಎರಡು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ವಿದೇಶಾಂಗ ಸಚಿವರು ಚೀನಾ ದೊಡ್ಡ ಆರ್ಥಿಕತೆಯಾಗಿದ್ದು, ಸಣ್ಣ ಆರ್ಥಿಕತೆಯಾಗಿರುವ ಭಾರತ ಅದಕ್ಕೆ ಪೈಪೋಟಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂದು ಬೆಟ್ಟು ಮಾಡಿದ್ದಾರೆ.

ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಚೀನಾ ಕುರಿತು ಚರ್ಚೆಗೆ ಪ್ರಧಾನಿ ಕೊನೆಗೂ ಒಪ್ಪಿಕೊಳ್ಳುತ್ತಾರೆ ಮತ್ತು ಈ ವಿಷಯದಲ್ಲಿ ಐದು ವರ್ಷಗಳ ಚರ್ಚೆಯ ಬರವನ್ನು ನೀಗಿಸುತ್ತಾರೆ ಎಂದು ಕಾಂಗ್ರೆಸ್ ಆಶಿಸಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News