ಸಾವರ್ಕರ್ ಕುರಿತ ಹೇಳಿಕೆಗೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು
ರಾಹುಲ್ ಗಾಂಧಿ | PC : PTI
ಮುಂಬೈ: 2022ರಲ್ಲಿ ನಡೆದಿದ್ದ ಭಾರತ್ ಜೋಡೊ ಯಾತ್ರೆಯಲ್ಲಿ ವಿ.ಡಿ.ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನಾಶಿಕ್ ನಗರ ನ್ಯಾಯಾಲಯವೊಂದು ಅವರಿಗೆ ಗುರುವಾರ ಜಾಮೀನು ಮಂಜೂರು ಮಾಡಿದೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಆರ್.ಸಿ.ನರ್ವಾಡಿಯ ಎದುರು ಹಾಜರಾದ ರಾಹುಲ್ ಗಾಂಧಿ, ತಾನು ನಿರ್ದೋಷಿ ಎಂದು ವಾದಿಸಿದರು.
ನಾಶಿಕ್ ನಿವಾಸಿ ದೇವೇಂದ್ರ ಭುಟಡ ಅವರು ವಕೀಲ ಮನೋಜ್ ಪಿಂಗ್ಲೆ ಮೂಲಕ ರಾಹುಲ್ ಗಾಂಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500ರ ಅಡಿ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ದಾಖಲಿಸಿದ್ದರು.
ಈ ಸಂಬಂಧ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿ, ತಾನು ನಿರ್ದೋಷಿ ಎಂದು ನ್ಯಾಯಾಲಯದ ಮುಂದೆ ವಾದಿಸಿದರು. ಇದರ ಬಳಿಕ, ರಾಹುಲ್ ಗಾಂಧಿ ಪರ ವಕೀಲರು ಜಾಮೀನಿಗೆ ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, 15,000 ರೂ. ನಗದು ಬಾಂಡ್ ನೊಂದಿಗೆ ಜಾಮೀನು ಮಂಜೂರು ಮಾಡಿತು ಎಂದು ದೂರುದಾರರ ಪರ ವಕೀಲ ಮನೋಜ್ ಪಿಂಗ್ಲೆ ತಿಳಿಸಿದರು.
ಈ ನಡುವೆ, ದೂರುದಾರ ಹಾಗೂ ಸರಕಾರೇತರ ಸಂಸ್ಥೆಯೊಂದರ ನಿರ್ದೇಶಕರಾದ ದೇವೇಂದ್ರ ಭುಟಡ, ರಾಹುಲ್ ಗಾಂಧಿ ಅವರು ಹಿಂಗೋಲಿಯಲ್ಲಿ ನಡೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಹಾಗೂ ನವೆಂಬರ್ 2022ರಲ್ಲಿ ನಡೆದಿದ್ದ ಭಾರತ್ ಜೋಡೊ ಯಾತ್ರೆಯಲ್ಲಿನ ಭಾಷಣದ ವೇಳೆ ಸಾವರ್ಕರ್ ಘನತೆಗೆ ಹಾನಿಯಾಗುವಂತಹ ಹೇಳಿಕೆ ನೀಡಿದ್ದಾರೆ ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದರು.