×
Ad

ಬಿಹಾರ | ರಾಹುಲ್ ಗಾಂಧಿಯವರ ಎಸ್‌ಐಆರ್ ವಿರೋಧಿ ಯಾತ್ರೆಗೆ ಹೆಚ್ಚಿದ ಜನಬೆಂಬಲ

Update: 2025-08-21 20:53 IST

 ರಾಹುಲ್ ಗಾಂಧಿ | PC:  PTI 

ಪಾಟ್ನಾ,ಆ.21: ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಮೂಲಕ ‘ಮತಗಳ್ಳತನ’ದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ 16 ದಿನಗಳ 3,000 ಕಿ.ಮೀ.ಯಾತ್ರೆಯು ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಜನತೆಯನ್ನು ಸೆಳೆಯುತ್ತಿದೆ.

ಜನರು ರಸ್ತೆಗಳಲ್ಲಿ ಸಾಲುಗಟ್ಟಿ ನಿಂತು ಧ್ವಜಗಳನ್ನು ಬೀಸುತ್ತ ರಾಹುಲ್‌ ರನ್ನು ಹುರಿದುಂಬಿಸುತ್ತಿದ್ದಾರೆ. ನೂರಾರು ಜನರು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಯಾತ್ರೆಗೆ ಜನರ ಪ್ರತಿಕ್ರಿಯೆಯಿಂದ ಸ್ವತಃ ರಾಹುಲ್ ಪರವಶಗೊಂಡಂತೆ ಕಂಡು ಬರುತ್ತಿದೆ.

ಮಂಗಳವಾರ ಯಾತ್ರೆಯು ಗಯಾದಿಂದ ನವಾದಾ ಮತ್ತು ಶೇಖ್‌ ಪುರದತ್ತ ಸಾಗಿದ್ದು, ನವಾದಾದಲ್ಲಿ ರಾಹುಲ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು.

ರಾಹುಲ್ ಜನರನ್ನು ಭೇಟಿಯಾಗಲು ಅನಿಗದಿತ ನಿಲುಗಡೆಗಳನ್ನು ಮಾಡುತ್ತಿರುವುದರಿಂದ ಯಾತ್ರೆಯು ವೇಳಾಪಟ್ಟಿಯಿಂದ ಹಿಂದಕ್ಕೆ ಸರಿಯುತ್ತಿದೆ. ಆದಾಗ್ಯೂ ರಾಹುಲ್ ಭೇಟಿ ಸಾಧ್ಯವಾಗದೆ ಕೆಲವರು ನಿರಾಶರಾಗಿದ್ದಾರೆ. ‘ನಾನು ರಾಹುಲ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದೆ,ಆದರೆ ಜನರ ದಟ್ಟಣೆಯಿಂದಾಗಿ ಅದು ಸಾಧ್ಯವಾಗಲಿಲ್ಲ’ ಎಂದು ಯುವಕನೋರ್ವ ಬೇಸರ ವ್ಯಕ್ತಪಡಿಸಿದ.

‘ರಾಹುಲ್‌ ರನ್ನು ಭೇಟಿಯಾಗಲು ನನಗೆ ಮತ್ತೆ ಅವಕಾಶ ಸಿಗುತ್ತದೆಯೇ ಎನ್ನುವುದು ನನಗೆ ತಿಳಿದಿಲ್ಲ’ ಎಂದು ನವಾದಾದ ವಿದ್ಯಾರ್ಥಿನಿ ಸಂಗೀತಾಕುಮಾರಿ(21) ಹೇಳಿದರೆ,ಆಕೆಯ ಸೋದರ ಸಂಬಂಧಿ ರಾಜ್‌ಕಿಶೋರ ಈ ವಿಷಯದಲ್ಲಿ ಅದೃಷ್ಟಶಾಲಿಯಾಗಿದ್ದಾರೆ.

‘ರಾಹುಲ್‌ರನ್ನು ಸಮೀಪಿಸಲು ನಾನು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಗುದ್ದಾಡಿದ್ದೆ. ಭದ್ರತೆ ಬಿಗಿಯಾಗಿತ್ತು,ಆದರೆ ರಾಹುಲ್ ಜೊತೆ ಫೋಟೊ ತೆಗೆಸಿಕೊಳ್ಳುವಲ್ಲಿ ನಾನು ಯಶಸ್ವಿಯಾಗಿದ್ದೇನೆ’ ಎಂದು ಅವರು ಹೇಳಿದರು.

ಒಗ್ಗಟ್ಟಿನ ಪ್ರದರ್ಶನವಾಗಿ ನವಾದಾ ಮತ್ತು ಶೇಖ್‌ಪುರಾ ಇಂಡಿಯಾ ಮೈತ್ರಿಕೂಟದ ಪಾಲುದಾರ ಪಕ್ಷಗಳ ಧ್ವಜಗಳಿಂದ ಅಲಂಕೃತಗೊಂಡಿದ್ದವು. ಆರ್‌ಜೆಡಿ ನಾಯಕ ತೇಜಸ್ವಿ ಯಾದವ,ಸಿಪಿಐ-ಎಂಎಲ್‌ನ ದೀಪಂಕರ್ ಭಟ್ಟಾಚಾರ್ಯ ಮತ್ತು ವಿಐಪಿ ನಾಯಕ ಮುಕೇಶ ಸಾಹನಿ ರಾಹುಲ್ ಜೊತೆಯಲ್ಲಿದ್ದರು. ಸ್ವಾಗತ ಕಮಾನುಗಳ ಬಳಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

ರಾಹುಲ್‌ ರನ್ನು ನೋಡಲೆಂದು ದೂರದ ಪ್ರದೇಶಗಳಿಂದ ವ್ಯಾಪಾರಿಗಳು ಮತ್ತು ರೈತರು ಆಗಮಿಸಿದ್ದರು. ಕನಸು ನನಸಾದಂತೆ ಭಾಸವಾಗುತ್ತಿದೆ ಎಂದು ಬರಬೀಘಾದ ಸಣ್ಣ ವ್ಯಾಪಾರಿ ಪಪ್ಪು ಕುಮಾರ್(38) ಹೇಳಿದರು.

ರಾಹುಲ್ ಮತ್ತು ಇತರ ನಾಯಕರನ್ನು ಇಂಡಿಯಾ ಮೈತ್ರಿಕೂಟದ ಜಿಲ್ಲಾ ಘಟಕಗಳ ಕಾರ್ಯಕರ್ತರು ಹೃತ್ಪೂರ್ವಕವಾಗಿ ಸ್ವಾಗತಿಸಿದರು.

‘ನಾನು ರಾಹುಲ್ ಬಗ್ಗೆ ಕೇಳಿದ್ದೆ. ಆದರೆ ಅವರನ್ನು ಭೇಟಿಯಾಗುವ ಅವಕಾಶ ಎಂದೂ ನನಗೆ ಸಿಕ್ಕಿರಲಿಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಮತಗಳ್ಳತನದ ವಿಷಯವನ್ನು ಅವರು ಎತ್ತಿದ್ದಾರೆ ’ಎಂದು ಬಾರಬೀಘಾ ನಿವಾಸಿ ಗಣೇಶ ರಾಮ ಹೇಳಿದರು.

ಯಾತ್ರೆಯು ಜನರಲ್ಲಿ ಭರವಸೆಗಳನ್ನು ಹೆಚ್ಚಿಸಿದೆ ಎಂದು ಸುದ್ದಿಗಾರರಿಗೆ ತಿಳಿಸಿದ ಭಟ್ಟಾಚಾರ್ಯ, ಈ ಯಾತ್ರೆಯು ಕೇವಲ ಚುನಾವಣೆಗಳ ಕುರಿತಲ್ಲ, ಆಡಳಿತದಲ್ಲಿ ಬದಲಾವಣೆಯ ಕುರಿತೂ ಆಗಿದೆ ಎಂದು ಹೇಳಿದರು.

ಯಾತ್ರೆಯ ನಡುವೆ ರಾಹುಲ್ ತನ್ನ ತೊಂದರೆಯನ್ನು ಹೇಳಿಕೊಳ್ಳುವಂತೆ ಸ್ಥಳೀಯ ಯುವಕ ಸುಬೋಧ ಕುಮಾರ್ ಅವರನ್ನು ಆಹ್ವಾನಿಸಿದರು. ತಾನು ಕಳೆದ ವರ್ಷ ಮತ ಚಲಾಯಿಸಿದ್ದರೂ ಮತದಾರರ ಪಟ್ಟಿಯಿಂದ ತನ್ನ ಹೆಸರನ್ನು ಅಳಿಸಲಾಗಿದೆ ಎಂದು ಕುಮಾರ್ ದೂರಿದರು.

ಬಿಜೆಪಿಯು ಚುನಾವಣಾ ಆಯೋಗದ ಶಾಮೀಲಾತಿಯೊಂದಿಗೆ ಮತಗಳನ್ನು ಕದಿಯುತ್ತಿದೆ ಎಂದು ಆರೋಪಿಸಿದ ರಾಹುಲ್, ‘ಬಿಹಾರದಿಂದ ಒಂದೇ ಒಂದು ಮತವನ್ನು ಕದಿಯಲು ನಾವು ಅವರಿಗೆ ಬಿಡುವುದಿಲ್ಲ’ ಎಂದು ಹರ್ಷೋದ್ಗಾರ ಮಾಡುತ್ತಿದ್ದ ಗುಂಪಿಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News