×
Ad

ಲಡಾಖ್ ಜನರು, ಸಂಸ್ಕೃತಿ, ಸಂಪ್ರದಾಯದ ಮೇಲೆ ಆರೆಸ್ಸೆಸ್‌, ಬಿಜೆಪಿ ದಾಳಿ : ರಾಹುಲ್ ಗಾಂಧಿ ವಾಗ್ಧಾಳಿ

Update: 2025-09-28 22:05 IST

ರಾಹುಲ್ ಗಾಂಧಿ | PC : PTI 

ಹೊಸದಿಲ್ಲಿ, ಸೆ. 28: ನಾಲ್ಕು ಮಂದಿಯ ಸಾವಿಗೆ ಕಾರಣವಾದ ಲಡಾಖ್‌ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಕುರಿತಂತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಲೋಕಸಭೆಯ ಪ್ರತಿಪಕ್ಷದ ನಾಯಕ ನಾಯಕ ರಾಹುಲ್ ಗಾಂಧಿ ರವಿವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಲಡಾಖ್ ಹಿಂಸಾಚಾರಕ್ಕೆ ಬಿಜೆಪಿ ಹಾಗೂ ಅದರ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್ ಅನ್ನು ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಲಡಾಖ್‌ನ ಜನರು, ಅವರ ಸಂಸ್ಕೃತಿ ಹಾಗೂ ಸಂಪ್ರದಾಯ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ದಾಳಿಗೆ ಒಳಗಾಗಿವೆ. ಲಡಾಕ್ ಜನರು ತಮ್ಮ ಅಭಿಪ್ರಾಯವನ್ನು ಸರಕಾರ ಆಲಿಸಬೇಕು ಹಾಗೂ ಗೌರವಿಸಬೇಕು ಎಂದು ಬಯಸಿದ್ದರು. ಆದರೆ ಬಿಜೆಪಿ ನಾಲ್ವರು ಯುವಕರನ್ನು ಹತ್ಯೆಗೈಯುವ ಮೂಲಕ ಪ್ರತಿಕ್ರಿಯಿಸಿದೆ. ಅಲ್ಲದೆ, ಸೋನಮ್ ವಾಂಗ್ಚುಕ್ ಅವರನ್ನು ಜೈಲಿಗೆ ಹಾಕಿದೆ. ಹತ್ಯೆಯನ್ನು ನಿಲ್ಲಿಸಿ, ಹಿಂಸಾಚಾರವನ್ನು ನಿಲ್ಲಿಸಿ. ಬೆದರಿಸುವುದನ್ನು ನಿಲ್ಲಿಸಿ. ಲಡಾಕ್‌ಗೆ ಧ್ವನಿ ನೀಡಿ. ಅವರಿಗೆ 6ನೇ ಪರಿಚ್ಛೇದದಲ್ಲಿ ಅವಕಾಶ ನೀಡಿ’’ ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಬರೆದಿದ್ದಾರೆ.

ವಾಂಗ್ಚುಕ್‌ ಅವರನ್ನು ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಬಂಧನದಲ್ಲಿ ಇರಿಸಿರುವ ಕುರಿತ ಮೌನವನ್ನು ಮಿತ್ರ ಪಕ್ಷವಾದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಪ್‌ (ಎಎಪಿ)ಪ್ರಶ್ನಿಸಿದ ದಿನದ ಬಳಿಕ ರಾಹುಲ್ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕಿಂತ ಮುನ್ನ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪರಿಸ್ಥಿತಿಯ ಶೋಚನೀಯ ನಿರ್ವಹಣೆ ಹಾಗೂ ವಾಂಗ್ಚುಕ್ ಅವರನ್ನು ಬಂಧಿಸಿರುವುದಕ್ಕೆ ಕೇಂದ್ರ ಸರಕಾರವನ್ನು ಖಂಡಿಸಿದ್ದರು. ಲಡಾಖ್‌ನಲ್ಲಿ ಪ್ರಜಾಪ್ರಭುತ್ವವನ್ನು ಕೂಡಲೇ ಮರು ಸ್ಥಾಪಿಸುವಂತೆ, ಅಲ್ಲದೆ ಪೊಲೀಸ್ ಗುಂಡಿನ ದಾಳಿಯಿಂದ ನಾಲ್ವರು ಯುವಕರು ಮೃತಪಟ್ಟ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದರು.

ರಾಜ್ಯದ ಸ್ಥಾನ ಮಾನ ಹಾಗೂ 6ನೇ ಪರಿಚ್ಛೇದದ ಅಡಿಯಲ್ಲಿ ರಕ್ಷಣೆ ನೀಡುವಂತೆ ಆಗ್ರಹಿಸಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ದಿನಗಳ ಬಳಿಕ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News