×
Ad

ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ: ರಾಹುಲ್ ಗಾಂಧಿ ಆರೋಪ

Update: 2025-10-02 19:32 IST

ರಾಹುಲ್ ಗಾಂಧಿ |Photo Credit : PTI 

ಕೊಲಂಬಿಯಾ (ಅಮೆರಿಕ): ಆಡಳಿತಾರೂಢ ಬಿಜೆಪಿಯು ಭಾರತದ ಪ್ರಜಾಸತ್ತಾತ್ಮಕ ಹೆಣಿಗೆಯನ್ನು ನಾಶಗೊಳಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಕೊಲಂಬಿಯಾದ ಇಐಎ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು ಈ ಆರೋಪ ಮಾಡಿದ್ದಾರೆ.

ಗುರುವಾರ ನಡೆದ ಸಂವಾದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್ ಗಾಂಧಿ, ಭಾರತದಲ್ಲಿನ ಸಾಂಸ್ಕೃತಿಕ ವೈವಿಧ್ಯತೆ, ತಾಂತ್ರಿಕ ಸಾಮರ್ಥ್ಯ ಹಾಗೂ ಆರೋಗ್ಯ ವ್ಯವಸ್ಥೆಯ ಕಾರಣಕ್ಕೆ ಭಾರತದ ಬಗ್ಗೆ ಭಾರಿ ಆಶಾವಾದ ವ್ಯಕ್ತಪಡಿಸಿದರು. ಆದರೆ, ಇದರ ನಡುವೆಯೂ ದೇಶವು ಗಂಭೀರ ಸಮಸ್ಯೆಗಳಿಗೆ ತುತ್ತಾಗಿದೆ ಎಂದು ಅವರು ಎಚ್ಚರಿಸಿದರು.

“ಒಂದೇ ಒಂದು ಭಾರಿ ಅಪಾಯವೆಂದರೆ, ಸದ್ಯ ಭಾರತದ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ದಾಳಿಯಾಗಿದೆ” ಎಂದು ಹೇಳಿದ ಅವರು, “ಭಾರತವು ವಾಸ್ತವವಾಗಿ ತನ್ನ ಎಲ್ಲ ಜನರಿರುವ ವೈವಿಧ್ಯಮಯ ದೇಶ. ಇಲ್ಲಿ ವಿಭಿನ್ನ ಸಂಪ್ರದಾಯಗಳು, ಧರ್ಮಗಳು ಹಾಗೂ ಯೋಚನೆಗಳಿಗೆ ಸ್ಥಳಾವಕಾಶ ದೊರೆಯಬೇಕಿದೆ. ಅದನ್ನು ಸೃಷ್ಟಿಸುವ ಅತ್ಯುತ್ತಮ ಮಾರ್ಗವೆಂದರೆ, ಪ್ರಜಾಸತ್ತಾತ್ಮಕ ವ್ಯವಸ್ಥೆ. ಸದ್ಯ ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆ ದಾಳಿ ನಡೆಯುತ್ತಿದೆ. ಹೀಗಾಗಿ, ಇದು ಅಪಾಯಕಾರಿಯಾಗಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಈ ವೇಳೆ ಚೀನಾದೊಂದಿಗೆ ಭಾರತದ ಹೋಲಿಕೆಯನ್ನೂ ಮಾಡಿದ ರಾಹುಲ್ ಗಾಂಧಿ, “ಜನರನ್ನು ಹತ್ತಿಕ್ಕುತ್ತಿರುವ ಚೀನಾದಂತೆ ಮಾಡಲು ಹಾಗೂ ನಿರಂಕುಶಾಧಿಕಾರವನ್ನು ಚಲಾಯಿಸಲು ನಮಗೆ ಸಾಧ್ಯವಿಲ್ಲ. ನಮ್ಮ ವಿನ್ಯಾಸ ಅದನ್ನು ಒಪ್ಪಿಕೊಳ್ಳುವುದಿಲ್ಲ” ಎಂದು ಅವರು ಹೇಳಿದರು.

2016ರಲ್ಲಿ ಬಿಜೆಪಿ ಸರಕಾರ ಕೈಗೊಂಡ ನೋಟು ಅಮಾನ್ಯ ನೀತಿಯನ್ನೂ ಟೀಕಿಸಿದ ಅವರು, ಅದು ವಿಫಲ ಕ್ರಮವಾಗಿತ್ತು ಎಂದು ಆರೋಪಿಸಿದರು. “ಅವರು ನಗದಿನಿಂದ ಹೊರಬರುವ ಚಿಂತನೆಯೊಂದಿಗೆ ನೋಟು ಅಮಾನ್ಯವನ್ನು ಮಾಡಿದರು. ಆದರೆ, ಅದು ಸಫಲವಾಗಲಿಲ್ಲ. ಒಂದು ನೀತಿಯಾಗಿ ಅದೊಂದು ವೈಫಲ್ಯ” ಎಂದು ಅವರು ಪ್ರತಿಪಾದಿಸಿದರು.

ರಾಹುಲ್ ಗಾಂಧಿ ಹೇಳಿಕೆಯ ವಿರುದ್ಧ ಆಡಳಿತಾರೂಢ ಬಿಜೆಪಿಯಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅವರ ವಿರುದ್ಧ ಬಿಜೆಪಿ ಸಂಸದೆ ಕಂಗನಾ ರಣಾವತ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಅವರೊಂದು ಅವಮಾನ. ಅವರು ದೇಶವನ್ನು ಟೀಕಿಸುವ ಮೂಲಕ, ದೇಶವನ್ನು ಅವಮಾನಿಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಒಂದು ವೇಳೆ ಇಲ್ಲಿನ ಜನರು ಕಿತ್ತಾಡುತ್ತಿದ್ದಾರೆ, ಅವರು ಪ್ರಾಮಾಣಿಕರಲ್ಲ ಎಂದು ಹೇಳುವುದಾದರೆ, ಅವರು ಇಂಥದ್ದನ್ನೆಲ್ಲ ಹೇಳುವ ಮೂಲಕ, ಭಾರತೀಯರು ಮತಿಹೀನರು ಎಂದು ಬಿಂಬಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಅರ್ಥ” ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆಯ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ಬಿಜೆಪಿ ನಾಯಕ ಗೌರವ್ ಭಾಟಿಯಾ ಕೂಡಾ ವಾಗ್ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News